Bible Versions
Bible Books

Job 21 (ERVKN) Easy to Read Version - Kannadam

1 ಬಳಿಕ ಯೋಬನು ಉತ್ತರಕೊಟ್ಟನು:
2 “ನಾನು ಹೇಳುವುದನ್ನು ಕೇಳಿ. ನಿಮ್ಮಿಂದ ನನಗಾಗಬೇಕಾದ ಆದರಣೆ ಇಷ್ಟೇ.
3 ನಾನು ಮಾತಾಡುವಾಗ ತಾಳ್ಮೆಯಿಂದಿರಿ. ನಾನು ಮಾತಾಡಿದ ಮೇಲೆ ನೀವು ನನ್ನನ್ನು ಗೇಲಿಮಾಡಿದರೂ ಮಾಡಿರಿ.
4 “ನಾನು ಮನುಷ್ಯನ ವಿರೋಧವಾಗಿ ದೂರು ಹೇಳುತ್ತಿಲ್ಲ. ನನ್ನಲ್ಲಿ ತಾಳ್ಮೆಯಿಲ್ಲದಿರುವುದಕ್ಕೆ ಒಂದು ಒಳ್ಳೆಯ ಕಾರಣವಿದೆ.
5 ನನ್ನನ್ನು ನೋಡಿ ಬೆರಗಾಗಿ ನಿಮ್ಮ ಬಾಯಿಯ ಮೇಲೆ ಕೈಯಿಟ್ಟುಕೊಳ್ಳಿರಿ. ಗಾಬರಿಯಿಂದ ನನ್ನನ್ನು ಎವೆಯಿಕ್ಕದೆ ನೋಡಿರಿ!
6 ನನಗೆ ಸಂಭವಿಸಿದ ಬಗ್ಗೆ ನಾನು ಯೋಚಿಸುವಾಗ ನನಗೆ ಭಯವಾಗುತ್ತದೆ; ನನ್ನ ದೇಹವು ನಡುಗುತ್ತದೆ.
7 ದುಷ್ಟರು ದೀರ್ಘಕಾಲ ಜೀವಿಸುವುದೇಕೆ? ಅವರು ವೃದ್ಧರಾಗುವವರೆಗೂ ಅಭಿವೃದ್ಧಿಯಾಗುತ್ತಾ ಬಾಳುವುದೇಕೆ?
8 ದುಷ್ಟರ ಮಕ್ಕಳು ತಮ್ಮ ತಂದೆತಾಯಿಗಳೊಂದಿಗಿದ್ದು ಬೆಳೆಯುವರು; ದುಷ್ಟರು ತಮ್ಮ ಮೊಮ್ಮಕ್ಕಳನ್ನೂ ನೋಡುವರು.
9 ಅವರ ಕುಟುಂಬಗಳು ಸುರಕ್ಷಿತವಾಗಿರುವುದರಿಂದ ಅವರಿಗೆ ಭಯವಿಲ್ಲ. ದೇವರು ದುಷ್ಟರನ್ನು ತನ್ನ ದೊಣ್ಣೆಯಿಂದ ದಂಡಿಸುವುದಿಲ್ಲ.
10 ಅವರ ಹೋರಿಗಳು ತಪ್ಪದೆ ಸಂಗಮಿಸುತ್ತವೆ. ಅವರ ಹಸುಗಳು ಕರುಗಳನ್ನು ಈಯುತ್ತವೆ.
11 ದುಷ್ಟರು ತಮ್ಮ ಮಕ್ಕಳನ್ನು ಕುರಿಮರಿಗಳಂತೆ ಆಟವಾಡಲು ಹೊರಗೆ ಕಳುಹಿಸುವರು. ಅವರ ಮಕ್ಕಳು ಸುತ್ತಮುತ್ತ ಕುಣಿದಾಡುವರು.
12 ಅವರು ತಂಬೂರಿಗಳನ್ನೂ ಹಾರ್ಪ್‌ವಾದ್ಯಗಳನ್ನೂ ಬಾರಿಸುತ್ತಾ ಹಾಡುವರು; ಕೊಳಲುಗಳ ಧ್ವನಿಗೆ ಉಲ್ಲಾಸಪಡುವರು.
13 ದುಷ್ಟರು ತಮ್ಮ ಜೀವಮಾನವೆಲ್ಲಾ ಏಳಿಗೆ ಹೊಂದುವರು. ಅವರು ಸಂಕಟಪಡದೆ ಸತ್ತು ಸಮಾಧಿಗೆ ಸೇರುವರು.
14 ಆದರೆ ದುಷ್ಟರು ದೇವರಿಗೆ, ‘ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಕೊಡು! ನಿನ್ನ ಮಾರ್ಗದ ತಿಳುವಳಿಕೆಯೇ ನಮಗೆ ಬೇಡ’ ಎನ್ನುವರು.
15 ದುಷ್ಟರು, ‘ಸರ್ವಶಕ್ತನಾದ ದೇವರು ಯಾರು? ನಾವು ಆತನ ಸೇವೆಮಾಡುವ ಅಗತ್ಯವಿಲ್ಲ! ಆತನಿಗೆ ಪ್ರಾರ್ಥಿಸುವುದರಿಂದ ಪ್ರಯೋಜನವೇನೂ ಇಲ್ಲ’ ಎಂದು ಹೇಳುವರು.
16 “ತಮ್ಮ ಏಳಿಗೆಗೆ ಕಾರಣ ತಾವೇ ಎಂದು ದುಷ್ಟರು ಯೋಚಿಸಿಕೊಂಡಿದ್ದಾರೆ. ಆದರೆ ಅವರ ಆಲೋಚನೆಗಳನ್ನು ನಾನು ತಿರಸ್ಕರಿಸುವೆ.
17 ಎಷ್ಟು ಸಲ ದುಷ್ಟರ ದೀಪವು ಆರಿಹೋಯಿತು? ಎಷ್ಟು ಸಲ ದುಷ್ಟರಿಗೆ ನಾಶನವು ಬರುವುದು? ದೇವರು ಎಷ್ಟು ಸಲ ಅವರ ಮೇಲೆ ಕೋಪಗೊಂಡು ಅವರನ್ನು ದಂಡಿಸುವನು?
18 ಗಾಳಿಯು ಹುಲ್ಲನ್ನೂ ಬಿರುಗಾಳಿಯು ಹೊಟ್ಟನ್ನೂ ಬಡಿದುಕೊಂಡು ಹೋಗುವಂತೆ ದೇವರು ದುಷ್ಟರನ್ನು ಎಷ್ಟು ಸಲ ಬಡಿದುಕೊಂಡು ಹೋಗುವನು?
19 ‘ದುಷ್ಟನ ಮಕ್ಕಳಿಗೆ ದೇವರು ದಂಡನೆಯನ್ನು ಶೇಖರಿಸಿಡುತ್ತಾನೆ’ ಎಂದು ನೀವು ಹೇಳುತ್ತೀರಿ. ಇಲ್ಲ! ದೇವರು ದುಷ್ಟನನ್ನೇ ದಂಡಿಸಲಿ. ಆಗ, ತನ್ನ ಸ್ವಂತ ಪಾಪಗಳಿಗಾಗಿ ತನಗೆ ದಂಡನೆಯಾಯಿತೆಂದು ಅವನು ತಿಳಿದುಕೊಳ್ಳುವನು.
20 ದುಷ್ಟನು ತನ್ನ ಸ್ವಂತ ನಾಶನವನ್ನು ತಾನೇ ನೋಡಲಿ; ಸರ್ವಶಕ್ತನಾದ ದೇವರ ಕೋಪವನ್ನು ಅನುಭವಿಸಲಿ.
21 ದುಷ್ಟನ ಜೀವಿತವು ಮುಗಿದುಹೋದ ಮೇಲೆ, ತಾನು ಬಿಟ್ಟುಹೋಗಿರುವ ತನ್ನ ಕುಟುಂಬದ ಬಗ್ಗೆ ಅವನು ಚಿಂತಿಸುವುದಿಲ್ಲ.
22 “ದೇವರಿಗೆ ಜ್ಞಾನವನ್ನು ಉಪದೇಶಿಸಲು ಯಾರಿಂದಲೂ ಆಗದು. ಮೇಲಿನ ಲೋಕದಲ್ಲಿರುವ ಜನರಿಗೂ ಸಹ ದೇವರು ನ್ಯಾಯತೀರಿಸುವನು.
23 ಒಬ್ಬನು ತನ್ನ ಜೀವಮಾನವೆಲ್ಲಾ ಯಶಸ್ವಿಯಾಗಿ ಬಾಳಿ ಸಾಯುವನು. ಅವನು ಸುರಕ್ಷಿತವೂ ಸುಖಕರವೂ ಆದ ಬಾಳ್ವೆಯನ್ನು ನಡೆಸಿದನು.
24 ಅವನ ದೇಹವು ಚೆನ್ನಾಗಿ ಪೋಷಿಸಲ್ಪಟ್ಟಿತು, ಅವನ ಎಲುಬುಗಳು ಮಜ್ಜೆಯಿಂದ ಇನ್ನೂ ಸಾರವಾಗಿರುವುದು.
25 ಆದರೆ ಮತ್ತೊಬ್ಬನು ಕಷ್ಟಕರವಾದ ಜೀವನದ ನಂತರ ಮನಗುಂದಿದವನಾಗಿ ಸಾಯುವನು. ಅವನು ಯಾವ ಸುಖವನ್ನೂ ಅನುಭವಿಸಲಿಲ್ಲ.
26 ಕೊನೆಯಲ್ಲಿ ಅವರಿಬ್ಬರೂ ಧೂಳಿನಲ್ಲಿ ಒಟ್ಟಿಗೆ ಮಲಗಿಕೊಳ್ಳುವರು. ಹುಳಗಳು ಅವರಿಬ್ಬರನ್ನೂ ಮುತ್ತಿಕೊಳ್ಳುವವು.
27 “ಆದರೆ, ನಿಮ್ಮ ಆಲೋಚನೆಗಳನ್ನು ಬಲ್ಲೆ, ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ನಾನು ಬಲ್ಲೆ.
28 ‘ನೀತಿವಂತನ ಮನೆಯು ಎಲ್ಲಿದೆ? ದುಷ್ಟರು ವಾಸವಾಗಿರುವುದು ಎಲ್ಲಿ?’ ಎಂದು ನೀವು ಕೇಳಬಹುದು.
29 “ನೀವು ಖಂಡಿತವಾಗಿಯೂ ಪ್ರಯಾಣಿಕರನ್ನು ಕೇಳಿದ್ದೀರಿ. ನೀವು ಖಂಡಿತವಾಗಿಯೂ ಅವರ ವರದಿಯನ್ನು ಒಪ್ಪಿಕೊಳ್ಳುವಿರಿ.
30 ಅಪಾಯ ಬಂದಾಗ ದುಷ್ಟನು ಪಾರಾಗುವನು; ದೇವರ ಕೋಪವು ತೋರಿಬರುವ ದಿನದಲ್ಲಿ ಅವನು ತಪ್ಪಿಸಿಕೊಳ್ಳುವನು.
31 ದುಷ್ಟನ ಕೆಟ್ಟಕಾರ್ಯದ ಬಗ್ಗೆ ಅವನ ಮುಖದೆದುರಿನಲ್ಲಿ ಯಾರೂ ಟೀಕಿಸುವುದಿಲ್ಲ. ಅವನು ಮಾಡಿದ ಕೇಡಿಗಾಗಿ ಯಾರೂ ಅವನನ್ನು ದಂಡಿಸುವುದಿಲ್ಲ.
32 ದುಷ್ಟನನ್ನು ಸಮಾಧಿಗೆ ಹೊತ್ತುಕೊಂಡು ಹೋದಾಗ ಅವನ ಸಮಾಧಿಯ ಸಮೀಪದಲ್ಲಿ ಕಾವಲುಗಾರರು ನಿಂತುಕೊಳ್ಳುವರು.
33 ದುಷ್ಟನಿಗೆ ಕಣಿವೆಯ ಮಣ್ಣು ಸಿಹಿಯಾಗಿರುವುದು. ಅವನ ಶವಸಂಸ್ಕಾರದ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಳ್ಳುವರು.
34 “ಆದ್ದರಿಂದ ನೀವು ನಿಮ್ಮ ಬರಿದಾದ ಮಾತುಗಳಿಂದ ನನ್ನನ್ನು ಸಂತೈಸಲಾರಿರಿ. ನಿಮ್ಮ ಉತ್ತರಗಳು ಕೇವಲ ಸುಳ್ಳೇ ಆಗಿವೆ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×