Bible Versions
Bible Books

Job 5 (ERVKN) Easy to Read Version - Kannadam

1 “ಯೋಬನೇ, ನೀನು ಕೂಗಿಕೊಂಡರೂ ನಿನಗೆ ಉತ್ತರಿಸುವವರಿಲ್ಲ; ದೇವದೂತರುಗಳಲ್ಲಿ ಯಾರನ್ನು ಆಶ್ರಯಿಸಿಕೊಳ್ಳುವೆ?
2 ಮೂಢನ ಕೋಪವು ಅವನನ್ನೇ ಕೊಲ್ಲುವುದು. ಮೂರ್ಖನ ಹೊಟ್ಟೇಕಿಚ್ಚು ಅವನನ್ನೇ ಕೊಲ್ಲುವುದು.
3 ಅಭಿವೃದ್ಧಿಯಾಗುತ್ತಿರುವ ಮೂರ್ಖನನ್ನು ನಾನು ನೋಡಿದ್ದೇನೆ. ಇದ್ದಕ್ಕಿದ್ದಂತೆ ಅವನ ಮನೆಯು ಶಾಪಗ್ರಸ್ತವಾಯಿತು.
4 ಅವನ ಮಕ್ಕಳಿಗೆ ಸಹಾಯಮಾಡುವಂಥವರು ಇರಲಿಲ್ಲ. ಅವರ ಪರವಾಗಿ ವಾದಿಸಲು ನ್ಯಾಯಾಲಯದಲ್ಲಿ ಒಬ್ಬರೂ ಇರಲಿಲ್ಲ.
5 ಹಸಿದಿರುವವರು ಮೂರ್ಖನ ಬೆಳೆಗಳನ್ನು ತಿಂದುಬಿಟ್ಟರು. ಅವರು ಬೇಲಿಗಳ ಮಧ್ಯದಲ್ಲಿ ಬೆಳೆಯುತ್ತಿರುವ ಧಾನ್ಯವನ್ನು ಸಹ ತಿಂದುಬಿಟ್ಟರು. ದುರಾಶೆಯುಳ್ಳವರು ಅವರ ಆಸ್ತಿಯನ್ನೆಲ್ಲಾ ಕಸಿದುಕೊಂಡರು.
6 ವಿಪತ್ಕಾಲಗಳು ಬರುವುದು ಧೂಳಿನಿಂದಲ್ಲ; ಕೇಡು ಬೆಳೆಯುವುದು ನೆಲದಿಂದಲ್ಲ.
7 ಆದರೆ ಮನುಷ್ಯರಿಂದ ಕೇಡುಗಳು ಉದ್ಭವಿಸುವುದೂ ಬೆಂಕಿಯಿಂದ ಕಿಡಿಗಳು ಮೇಲಕ್ಕೆ ಹಾರುವುದೂ ಸಹಜ.
8 “ಯೋಬನೇ, ನಾನೇನಾದರೂ ನಿನ್ನ ಸ್ಥಿತಿಯಲ್ಲಿದ್ದಿದ್ದರೆ, ದೇವರನ್ನೇ ಆಶ್ರಯಿಸಿಕೊಂಡು ನನ್ನ ಕಷ್ಟವನ್ನು ಆತನಿಗೆ ಹೇಳಿಕೊಳ್ಳುತ್ತಿದ್ದೆನು.
9 ದೇವರ ಅದ್ಭುತಕಾರ್ಯಗಳು ಗ್ರಹಿಸಲಶಕ್ಯ. ಆತನ ಮಹತ್ಕಾರ್ಯಗಳು ಅಸಂಖ್ಯಾತ.
10 ದೇವರು ಭೂಮಿಯ ಮೇಲೆ ಮಳೆ ಸುರಿಸಿ ಹೊಲಗದ್ದೆಗಳಿಗೆ ನೀರನ್ನು ಒದಗಿಸುವನು.
11 ದೇವರು ಹೀನಸ್ಥಿತಿಯಲ್ಲಿರುವವರನ್ನು ಉನ್ನತಸ್ಥಿತಿಗೆ ಏರಿಸುವನು. ವ್ಯಥೆಯಿಂದಿರುವವರನ್ನು ಸಂತೋಷಗೊಳಿಸುವನು.
12 ದೇವರು ಯುಕ್ತಿವಂತರ ಕುತಂತ್ರಗಳನ್ನು ವಿಫಲಗೊಳಿಸಿ ಭಂಗಪಡಿಸುವನು.
13 ದೇವರು ಜ್ಞಾನಿಗಳನ್ನು ಅವರ ತಂತ್ರಗಳಲ್ಲೇ ಹಿಡಿದುಕೊಳ್ಳುವನು; ಮೋಸಗಾರರ ಆಲೋಚನೆಗಳನ್ನು ವಿಫಲಗೊಳಿಸುವನು.
14 ಯುಕ್ತಿವಂತರು ಹಗಲಿನಲ್ಲೂ ಕತ್ತಲೆಗೆ ಓಡಿಹೋಗುವರು; ನಡುಮಧ್ಯಾಹ್ನದಲ್ಲಿ ಕತ್ತಲೆಯಲ್ಲೋ ಎಂಬಂತೆ ಮುಗ್ಗರಿಸುವರು.
15 ದೇವರು ಬಡವರನ್ನು ದುಷ್ಟರ ನಿಂದನೆಯಿಂದಲೂ ಬಲಿಷ್ಠರ ಕೈಯಿಂದಲೂ ಕಾಪಾಡುವನು.
16 ಹೀಗೆ ಬಡವನಿಗೆ ನಿರೀಕ್ಷೆ ಉಂಟಾಗುವುದು. ಅನ್ಯಾಯವು ತನ್ನ ಬಾಯನ್ನು ಮುಚ್ಚಿಕೊಳ್ಳುವುದು.
17 “ಇಗೋ ದೇವರು ಯಾವನನ್ನು ಶಿಕ್ಷಿಸುವನೋ ಅವನೇ ಭಾಗ್ಯವಂತನು. ಆದ್ದರಿಂದ ಸರ್ವಶಕ್ತನಾದ ದೇವರು ನಿನ್ನನ್ನು ಶಿಕ್ಷಿಸುವಾಗ ದೂರು ಹೇಳಬೇಡ.”
18 ಗಾಯಮಾಡುವವನೂ ಗಾಯಕಟ್ಟುವವನೂ ಆತನೇ. ಆತನು ಗಾಯಮಾಡಿದರೂ ಆತನ ಕೈಗಳೇ ವಾಸಿಮಾಡುತ್ತವೆ.
19 ಆತನು ನಿನ್ನನ್ನು ಆರು ಆಪತ್ತುಗಳಿಂದ ರಕ್ಷಿಸುವನು; ಹೌದು, ಏಳನೆಯ ಆಪತ್ತಿನಿಂದಲೂ ನಿನಗೆ ಕೇಡಾಗದು.
20 ಬರಗಾಲದಲ್ಲಿ ಮರಣದಿಂದಲೂ ಯುದ್ಧದಲ್ಲಿ ಕತ್ತಿಯಿಂದಲೂ ಆತನು ನಿನ್ನನ್ನು ಸಂರಕ್ಷಿಸುವನು.
21 ದೇವರು ನಿನ್ನನ್ನು ನಿಂದನೆಯಿಂದ ತಪ್ಪಿಸುವನು. ನಾಶನದಲ್ಲಿಯೂ ನೀನು ಭಯಪಡುವ ಅಗತ್ಯವಿಲ್ಲ!
22 ನಾಶನಕ್ಕೂ ಬರಗಾಲಕ್ಕೂ ನೀನು ನಗುವೆ. ನೀನು ಕ್ರೂರಪ್ರಾಣಿಗಳಿಗೆ ಭಯಪಡುವ ಅಗತ್ಯವಿಲ್ಲ!
23 ನೀನು ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವೆ; ಕಾಡುಮೃಗಗಳೂ ನಿನ್ನೊಂದಿಗೆ ಸಮಾಧಾನದಿಂದಿರುತ್ತವೆ.
24 ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ. ನೀನು ನಿನ್ನ ಆಸ್ತಿಯನ್ನು ಲೆಕ್ಕಿಸುವಾಗ ಯಾವುದೂ ಕಳೆದು ಹೋಗಿರುವುದಿಲ್ಲ.
25 ನೀನು ಅನೇಕ ಮಕ್ಕಳನ್ನು ಪಡೆದುಕೊಳ್ಳುವೆ. ಅವರು ಭೂಮಿಯ ಮೇಲಿರುವ ಹುಲ್ಲಿನ ಗರಿಗಳಷ್ಟಿರುವರು.
26 ಸುಗ್ಗಿಕಾಲದವರೆಗೂ ಬೆಳೆದು ಬಲಿಯುವ ಗೋಧಿಯಂತೆ ನೀನಿರುವೆ. ಹೌದು, ನೀನು ವೃದ್ಧಾಪ್ಯದ ಕೊನೆಯವರೆಗೂ ಜೀವಿಸುವೆ.
27 “ಯೋಬನೇ, ನಾವು ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ. ಆದ್ದರಿಂದ ನೀನು ಸಹ ಕಿವಿಗೊಟ್ಟು ಅವುಗಳನ್ನು ತಿಳಿದುಕೋ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×