Bible Versions
Bible Books

Judges 10 (ERVKN) Easy to Read Version - Kannadam

1 ಅಬೀಮೆಲೆಕನು ಸತ್ತ ತರುವಾಯ ಇಸ್ರೇಲರನ್ನು ರಕ್ಷಿಸಲು ಯೆಹೋವನು ಮತ್ತೊಬ್ಬ ನ್ಯಾಯಾಧೀಶನನ್ನು ಕಳುಹಿಸಿದನು. ಅವನ ಹೆಸರು ತೋಲ. ತೋಲನು ಪೂವನ ಮಗನು. ಪೂವನು ದೋದೋ ಎಂಬವನ ಮಗನು. ತೋಲನು ಇಸ್ಸಾಕಾರ್ ಕುಲಕ್ಕೆ ಸೇರಿದವನೂ ಶಾಮೀರ ನಗರದ ವಾಸಿಯೂ ಆಗಿದ್ದನು. ಶಾಮೀರ ನಗರವು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿತ್ತು.
2 ತೋಲನು ಇಪ್ಪತ್ತಮೂರು ವರುಷಗಳವರೆಗೆ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಆಮೇಲೆ ತೋಲನು ಮರಣ ಹೊಂದಿದನು. ಶಾಮೀರಿನಲ್ಲಿ ಅವನ ಸಮಾಧಿ ಮಾಡಲಾಯಿತು.
3 ತೋಲನ ಮರಣದ ತರುವಾಯ ಯೆಹೋವನು ಮತ್ತೊಬ್ಬ ನ್ಯಾಯಾಧೀಶನನ್ನು ಕಳುಹಿಸಿದನು. ಅವನ ಹೆಸರು ಯಾಯೀರ. ಯಾಯೀರನು ಗಿಲ್ಯಾದ್ ಪ್ರದೇಶದಲ್ಲಿ ವಾಸವಾಗಿದ್ದನು. ಯಾಯೀರನು ಇಪ್ಪತ್ತೆರಡು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು.
4 ಯಾಯೀರನಿಗೆ ಮೂವತ್ತು ಗಂಡು ಮಕ್ಕಳಿದ್ದರು. ಅವರು ಮೂವತ್ತು ಕತ್ತೆಗಳ ಮೇಲೆ ಸವಾರಿ ಮಾಡುತ್ತಿದ್ದರು.12 ಮೂವತ್ತು ಮಂದಿ ಗಂಡುಮಕ್ಕಳು ಗಿಲ್ಯಾದ್ ಪ್ರದೇಶದಲ್ಲಿ ಮೂವತ್ತು ಪಟ್ಟಣಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಅವುಗಳಿಗೆ ಇಂದಿನವರೆಗೂ ಯಾಯೀರನ ಪಟ್ಟಣಗಳೆಂದು ಹೆಸರಿದೆ.
5 ಯಾಯೀರನು ಸತ್ತನು. ಅವನನ್ನು ಕಾಮೋನಿನಲ್ಲಿ ಹೂಳಿಟ್ಟರು.
6 ಇಸ್ರೇಲರು ಮತ್ತೆ ದೇವರಿಗೆ ವಿರೋಧವಾಗಿ ದುಷ್ಕೃತ್ಯಗಳನ್ನು ಮಾಡಿದರು. ಅವರು ಸುಳ್ಳುದೇವರಾದ ಬಾಳನನ್ನೂ ಸುಳ್ಳುದೇವತೆಯಾದ ಅಷ್ಟೋರೆತಳನ್ನೂ ಪೂಜಿಸತೊಡಗಿದರು. ಅವರು ಅರಾಮ್ಯರ, ಚೀದೋನ್ಯರ, ಮೋವಾಬ್ಯರ, ಅಮ್ಮೋನಿಯರ ಮತ್ತು ಫಿಲಿಷ್ಟಿಯರ ದೇವರುಗಳನ್ನು ಸಹ ಪೂಜಿಸಿದರು. ಇಸ್ರೇಲರು ಯೆಹೋವನನ್ನು ಮರೆತುಬಿಟ್ಟು ಆತನ ಸೇವೆಯನ್ನು ನಿಲ್ಲಿಸಿಬಿಟ್ಟರು.
7 ಆದುದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಫಿಲಿಷ್ಟಿಯರು ಮತ್ತು ಅಮ್ಮೋನಿಯರು ಅವರನ್ನು ಸೋಲಿಸುವಂತೆ ಮಾಡಿದನು.
8 ಅದೇ ವರ್ಷ ಅವರು ಜೋರ್ಡನ್ ನದಿಯ ಪೂರ್ವಕ್ಕಿರುವ ಗಿಲ್ಯಾದಿನಲ್ಲಿದ್ದ ಇಸ್ರೇಲರನ್ನು ನಾಶಮಾಡಿದರು. ಅದು ಮೊದಲು ಅಮೋರಿಯರ ಪ್ರದೇಶವಾಗಿತ್ತು. ಇಸ್ರೇಲರು ಹದಿನೆಂಟು ವರ್ಷಗಳವರೆಗೆ ಕಷ್ಟವನ್ನು ಅನುಭವಿಸಿದರು.
9 ಅಮ್ಮೋನಿಯರು ಜೋರ್ಡನ್ ನದಿಯನ್ನು ದಾಟಿ ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಕುಲಗಳ ಜನರೊಡನೆ ಯುದ್ಧ ಮಾಡಿದರು. ಅಮ್ಮೋನಿಯರು, ಇಸ್ರೇಲರಿಗೆ ಅನೇಕ ಕಷ್ಟಗಳನ್ನು ಕೊಟ್ಟರು.
10 ಆಗ ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. ಅವರು, “ನಾವು ನಿನ್ನ ವಿರುದ್ಧವಾಗಿ ಪಾಪ ಮಾಡಿದ್ದೇವೆ. ನಾವು ನಮ್ಮ ದೇವರನ್ನು ಬಿಟ್ಟು ಸುಳ್ಳುದೇವರಾದ ಬಾಳನನ್ನು ಪೂಜಿಸಿದ್ದೇವೆ” ಎಂದು ಮರುಗಿದರು.
11 ಯೆಹೋವನು ಇಸ್ರೇಲರಿಗೆ, “ಈಜಿಪ್ಟಿನವರು, ಅಮೋರಿಯರು, ಅಮ್ಮೋನಿಯರು, ಮತ್ತು ಫಿಲಿಷ್ಟಿಯರು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ. ನಾನು ನಿಮ್ಮನ್ನು ಅವರಿಂದ ರಕ್ಷಿಸಿದೆ.
12 ಚೀದೋನ್ಯರು, ಅಮಾಲೇಕ್ಯರು, ಮಿದ್ಯಾನ್ಯರು ನಿಮ್ಮನ್ನು ಪೀಡಿಸಿದಾಗ ನನಗೆ ಮೊರೆಯಿಟ್ಟಿರಿ. ಅವರಿಂದಲೂ ನಾನು ನಿಮ್ಮನ್ನು ರಕ್ಷಿಸಿದೆ.
13 ಆದರೆ ನೀವು ನನ್ನನ್ನು ತ್ಯಜಿಸಿದಿರಿ. ನೀವು ಬೇರೆ ದೇವರುಗಳನ್ನು ಪೂಜಿಸಿದಿರಿ. ಆದುದರಿಂದ ನಾನು ಮತ್ತೆ ನಿಮ್ಮನ್ನು ರಕ್ಷಿಸುವುದಿಲ್ಲ.
14 ನೀವು ದೇವರುಗಳನ್ನು ಪೂಜಿಸಲು ಇಷ್ಟಪಡುತ್ತೀರಿ. ಆದುದರಿಂದ ಹೋಗಿ ಅವರನ್ನೇ ಸಹಾಯಕ್ಕಾಗಿ ಮೊರೆಯಿಡಿ. ನೀವು ಕಷ್ಟದಲ್ಲಿರುವಾಗ ದೇವರುಗಳೇ ನಿಮ್ಮನ್ನು ರಕ್ಷಿಸಲಿ” ಎಂದು ಉತ್ತರಿಸಿದನು.
15 ಆದರೆ ಇಸ್ರೇಲರು ಯೆಹೋವನಿಗೆ, “ನಾವು ಪಾಪ ಮಾಡಿದ್ದೇವೆ. ನಿನಗೆ ಸರಿಯೆನಿಸಿದಂತೆ ಮಾಡು. ಆದರೆ ದಯವಿಟ್ಟು ಇಂದು ನಮ್ಮನ್ನು ರಕ್ಷಿಸು” ಎಂದು ಪ್ರಾರ್ಥಿಸಿದರು.
16 ಆಗ ಇಸ್ರೇಲರು ಅನ್ಯದೇವರುಗಳನ್ನು ತೊರೆದು ಯೆಹೋವನನ್ನು ಆರಾಧಿಸಲು ಆರಂಭಿಸಿದರು. ಅವರು ಕಷ್ಟಪಡುತ್ತಿರುವುದನ್ನು ನೋಡಿ ಯೆಹೋವನು ಮರುಕಪಟ್ಟನು.
17 ಅಮ್ಮೋನಿಯರು ಯುದ್ಧಕ್ಕೆಂದು ಒಂದೆಡೆ ಸೇರಿದರು. ಅವರು ಗಿಲ್ಯಾದ್‌ನಲ್ಲಿ ಪಾಳೆಯ ಮಾಡಿಕೊಂಡಿದ್ದರು. ಇಸ್ರೇಲರು ಒಂದೆಡೆ ಸೇರಿಕೊಂಡರು. ಅವರ ಪಾಳೆಯವು ಮಿಚ್ಛೆಯಲ್ಲಿ ಇತ್ತು.
18 ಗಿಲ್ಯಾದ್ ಕ್ಷೇತ್ರದಲ್ಲಿ ವಾಸಮಾಡುತ್ತಿದ್ದ ಜನನಾಯಕರು, “ಅಮ್ಮೋನಿಯರ ಮೇಲೆ ಧಾಳಿಮಾಡಲು ಯಾರು ನಮ್ಮ ಮುಂದಾಳಾಗುತ್ತಾರೋ ವ್ಯಕ್ತಿಯೇ ಗಿಲ್ಯಾದ್ ಕ್ಷೇತ್ರದಲ್ಲಿ ವಾಸಮಾಡುವ ಜನರೆಲ್ಲರಿಗೂ ನಾಯಕನಾಗುತ್ತಾನೆ” ಎಂದು ಸಾರಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×