Bible Versions
Bible Books

Micah 1 (ERVKN) Easy to Read Version - Kannadam

1 ಯೆಹೋವನ ಮಾತುಗಳು ಮೀಕನಿಗೆ ಬಂದವು. ಅರಸರಾದ ಯೇಥಾಮ, ಅಹಾಜ ಮತ್ತು ಹಿಜ್ಕೀಯರ ಆಳ್ವಿಕೆಯ ಸಮಯದಲ್ಲಿ ಇದು ನಡೆಯಿತು. ಇವರು ಯೆಹೂದ ರಾಜ್ಯದ ಅರಸರು. ಮೀಕನು ಮೋರೆಷೆತ್‌ನವನು. ಇವನು ಸಮಾರ್ಯ ಮತ್ತು ಜೆರುಸಲೇಮಿನ ವಿಷಯವಾಗಿ ದೇವದರ್ಶನವನ್ನು ಹೊಂದಿದನು.
2 ಎಲ್ಲಾ ಜನರೇ, ಕೇಳಿರಿ! ಭೂಮಿಯೂ ಅದರಲ್ಲಿರುವವರೆಲ್ಲರೂ ಕೇಳಿರಿ! ನನ್ನ ಒಡೆಯನಾದ ಯೆಹೋವನು ತನ್ನ ಪವಿತ್ರ ಆಲಯದಿಂದ ಬರುವನು. ನಿಮ್ಮ ವಿರುದ್ಧ ಸಾಕ್ಷಿಯಾಗಿ ಆತನು ಬರುವನು.
3 ಯೆಹೋವನು ತನ್ನ ಸ್ಥಳದಿಂದ ಹೊರಟು ಬರುವುದನ್ನು ನೋಡಿರಿ. ಆತನು ಲೋಕದ ಬೆಟ್ಟಗಳ ಮೇಲೆ ನಡೆಯಲು ಬರುತ್ತಿದ್ದಾನೆ.
4 ಬೆಂಕಿಯಲ್ಲಿ ಮೇಣವು ಕರಗುವಂತೆ ಬೆಟ್ಟಗಳು ಆತನ ಪಾದದಡಿಯಿಂದ ಕರಗಿ ಹೋಗುತ್ತವೆ. ತಗ್ಗುಗಳು ಇಬ್ಭಾಗವಾಗಿ ನೀರಿನಂತೆ ಕಡಿದಾದ ಸ್ಥಳದಿಂದ ಹರಿದು ಹೋಗುತ್ತವೆ.
5 ಇದಕ್ಕೆಲ್ಲಾ ಕಾರಣ ಯಾಕೋಬನ ಪಾಪಗಳೇ, ಇಸ್ರೇಲರ ದ್ರೋಹಗಳೇ! ಯಾಕೋಬು ಪಾಪ ಮಾಡಿದ್ದಕ್ಕೆ ಕಾರಣವೇನು? ಸಮಾರ್ಯವೇ ಕಾರಣ. ಯೆಹೂದದ ಎತ್ತರವಾದ ಸ್ಥಳ ಯಾವುದು? ಅದೇ ಜೆರುಸಲೇಮ್.
6 ಆದುದರಿಂದ ನಾನು ಸಮಾರ್ಯವನ್ನು ಕಲ್ಲಿನ ರಾಶಿಯನ್ನಾಗಿ ಮಾಡುವೆನು. ಅದು ದ್ರಾಕ್ಷಾಬಳ್ಳಿ ನೆಡಲು ಸಿದ್ಧವಾಗುವುದು. ಸಮಾರ್ಯದ ಕಲ್ಲುಗಳನ್ನೆಲ್ಲಾ ತಗ್ಗಿಗೆ ನೂಕಿಬಿಡುವೆನು; ಆಗ ಅಲ್ಲಿ ಬರಿ ಅಸ್ತಿವಾರಗಳು ಕಾಣುವವು.
7 ಆಕೆಯ ವಿಗ್ರಹಗಳೆಲ್ಲಾ ಒಡೆದು ಪುಡಿ ಮಾಡಲ್ಪಡುವವು. ಆಕೆಯ ಸೂಳೇತನದ ಹಣವು ಬೆಂಕಿಯಲ್ಲಿ ಸುಡಲ್ಪಡುವುದು. ಆಕೆಯ ಸುಳ್ಳುದೇವರ ವಿಗ್ರಹಗಳನ್ನೆಲ್ಲಾ ನಾಶಮಾಡುವೆನು. ಯಾಕಂದರೆ ಸಮಾರ್ಯ ನನಗೆ ಅಪನಂಬಿಗಸ್ತಳಾಗಿ ಧನಿಕಳಾದಳು. ನನಗೆ ನಂಬಿಗಸ್ತರಲ್ಲದವರು ಆಕೆಯಿಂದ ಅದನ್ನು ಕಸಿದುಕೊಳ್ಳುವರು.
8 ಮುಂಬರುವ ಸಂಭವಗಳಿಗಾಗಿ ನಾನು ಬಹಳ ದುಃಖಿತನಾಗಿದ್ದೇನೆ. ಬಟ್ಟೆಬರೆ, ಕೆರಗಳಿಲ್ಲದೆ ನಾನು ನಡೆಯುವೆನು. ನಾಯಿಯಂತೆ ಮೊರೆಯಿಡುವೆನು, ಪಕ್ಷಿಯಂತೆ ಮುಲುಗುವೆನು.
9 ಸಮಾರ್ಯದ ಗಾಯವು ವಾಸಿಯಾಗದು. ಆಕೆಯ ರೋಗವು (ಪಾಪ) ಯೆಹೂದಕ್ಕೆ ಹಬ್ಬಿಯದೆ. ಅದು ನನ್ನ ಜನರ ಪಟ್ಟಣದ ಹೆಬ್ಬಾಗಿಲಿನವರೆಗೆ ಹೋಗಿದೆ. ಜೆರುಸಲೇಮಿನ ತನಕ ಪಸರಿಸಿಯದೆ.
10 ಇದನ್ನು ಗತ್‌ನಲ್ಲಿ ತಿಳಿಸಬೇಡಿ. ಅಕ್ಕೊದಲ್ಲಿ ಅಳಬೇಡಿರಿ. ಬೆತ್ ಒಫ್ರದ ಧೂಳಿನಲ್ಲಿ ಹೊರಳಾಡಿರಿ.
11 ಶಾಫೀರ್‌ನಲ್ಲಿ ವಾಸಿಸುವವರೇ, ಬೆತ್ತಲೆಯಾಗಿ ನಾಚಿಕೆಯಿಂದ ನಡೆಯಿರಿ. ಚಾನಾನ್‌ನಲ್ಲಿ ವಾಸಿಸುವವರು ಹೊರಗೆ ಬರುವದಿಲ್ಲ. ಬೇತೇಚೆಲಿನ ಜನರು ಅಳುವರು, ನಿಮಗೆ ಅವರು ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವರು.
12 ಮಾರೊತ್‌ನಲ್ಲಿ ವಾಸಿಸುವ ಜನರು ಬಲಹೀನರಾಗಿದ್ದಾರೆ. ಅವರು ಶುಭವಾರ್ತೆಗಾಗಿ ಕಾಯುತ್ತಿದ್ದಾರೆ. ಯಾಕೆಂದರೆ ಜೆರುಸಲೇಮಿನ ನಗರ ದ್ವಾರದ ಬಳಿಗೆ ಯೆಹೋವನಿಂದ ಆಪತ್ತು ಬಂದಿದೆ.
13 ಲಾಕೀಷಿನ ಸ್ತ್ರೀಯೇ, ವೇಗವಾಗಿ ಓಡುವ ಕುದುರೆಯನ್ನು ನಿನ್ನ ಬಂಡಿಗೆ ಬಿಗಿ. ಚೀಯೋನಿನ ಪಾಪವು ಲಾಕೀಷಿನಲ್ಲಿ ಪ್ರಾರಂಭವಾಯಿತು. ಯಾಕೆಂದರೆ ನೀನು ಇಸ್ರೇಲಿನ ಪಾಪವನ್ನು ಅನುಸರಿಸಿದಿ.
14 ಆದುದರಿಂದ ಗತ್‌ನಲ್ಲಿರುವ ಮೋರೆಷತ್‌ಗೆ ವಿದಾಯ ಕಾಣಿಕೆಗಳನ್ನು ಕೊಡು. ಅಕ್ಜೀಬಿನ ಕುಟುಂಬಗಳು ಇಸ್ರೇಲ್ ಅರಸರನ್ನು ಮೋಸಪಡಿಸುವವು.
15 ಮಾರೇಷದಲ್ಲಿ ವಾಸಿಸುವ ಜನರೇ, ನಿಮಗೆ ವಿರುದ್ಧವಾಗಿ ನಾನು ಒಬ್ಬ ವ್ಯಕ್ತಿಯನ್ನು ಕರೆತರುವೆನು. ಅವನು ನಿಮ್ಮ ಬಳಿಯಲ್ಲಿರುವ ವಸ್ತುಗಳನ್ನು ಕಿತ್ತುಕೊಳ್ಳುವನು. ಇಸ್ರೇಲಿನ ಮಹಿಮೆಯು (ದೇವರ) ಅದುಲ್ಲಾಮಿಗೆ ಬರುವವು.
16 ನಿನ್ನ ಕೂದಲನ್ನು ಬೋಳಿಸು; ಯಾಕೆಂದರೆ ನೀನು ಪ್ರೀತಿಸುವ ಮಕ್ಕಳಿಗಾಗಿ ನೀನು ಅಳುವೆ. ಗಿಡುಗನಂತೆ ನಿನ್ನ ತಲೆ ಬೋಳಾಗಲಿ. ನಿನ್ನ ದುಃಖವನ್ನು ಪ್ರದರ್ಶಿಸು. ಯಾಕೆಂದರೆ ನಿನ್ನ ಮಕ್ಕಳು ನಿನ್ನಿಂದ ತೆಗೆಯಲ್ಪಡುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×