Bible Versions
Bible Books

Micah 6 (ERVKN) Easy to Read Version - Kannadam

1 ಯೆಹೋವನು ಹೇಳುವದನ್ನು ಕೇಳಿರಿ: ನಿನ್ನ ವ್ಯಾಜ್ಯವನ್ನು ಬೆಟ್ಟಗಳಿಗೆ ತಿಳಿಸು. ಗುಡ್ಡಗಳು ನಿನ್ನ ಕಥೆಯನ್ನು ಕೇಳಲಿ.
2 ಯೆಹೋವನಿಗೆ ತನ್ನ ಜನರ ವಿರುದ್ಧವಾಗಿ ವ್ಯಾಜ್ಯವಿದೆ. ಪರ್ವತಗಳೇ, ಭೂಮಿಯ ಅಸ್ತಿವಾರವೇ, ಯೆಹೋವನ ದೂರುಗಳನ್ನು ಕೇಳಿರಿ. ಇಸ್ರೇಲ್ ತಪ್ಪಿತಸ್ಥನೆಂದು ಆತನು ಧೃಡಪಡಿಸುವನು.
3 ಯೆಹೋವನು ಹೇಳುವದೇನಂದರೆ, “ನನ್ನ ಜನರೇ, ನಾನು ಮಾಡಿದ್ದೇನು ತಿಳಿಸಿರಿ. ನಿಮಗೆ ವಿರೋಧವಾಗಿ ನಾನು ಏನಾದರೂ ಮಾಡಿದ್ದೇನೋ? ನಿಮಗೆ ಜೀವಿಸಲು ಕಷ್ಟವಾಗುವಂತೆ ಮಾಡಿದ್ದೇನೋ?
4 ನಾನು ಮಾಡಿದ್ದನ್ನು ನಿಮಗೆ ಹೇಳುತ್ತೇನೆ, ನಾನು ನಿಮ್ಮ ಬಳಿಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ಕಳುಹಿಸಿದೆನು. ನಾನು ಈಜಿಪ್ಟ್ ದೇಶದಿಂದ ನಿಮ್ಮನ್ನು ಕರೆತಂದೆನು. ಗುಲಾಮತನದಿಂದ ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದೆನು.
5 ನನ್ನ ಜನರೇ, ಮೋವಾಬ್ಯರ ಅರಸನಾದ ಬಾಲಾಕನ ದುಷ್ಟ ಯೋಜನೆಯನ್ನು ನೆನಪುಮಾಡಿರಿ. ಬೆಯೋರನ ಮಗನಾದ ಬಿಳಾಮನು ಬಾಲಾಕನಿಗೆ ಏನು ಹೇಳಿದನೆಂದು ಜ್ಞಾಪಕಮಾಡಿರಿ. ಶಿಟ್ಟೀಮಿನಿಂದ ಗಿಲ್ಗಾಲಿನ ತನಕ ನಡೆದ ಘಟನೆಗಳನ್ನು ನಿಮ್ಮ ನೆನಪಿಗೆ ತಂದುಕೊಳ್ಳಿರಿ. ಅವೆಲ್ಲವನ್ನು ನೀವು ನೆನಪು ಮಾಡಿದರೆ ಯೆಹೋವನು ನೀತಿವಂತನು ಎಂದು ನಿಮಗೆ ಗೊತ್ತಾಗುವದು.”
6 ನಾನು ದೇವರಾದ ಯೆಹೋವನನ್ನು ಸಂಧಿಸಲು ಬರುವಾಗ ಏನನ್ನು ತೆಗೆದುಕೊಂಡು ಬರಲಿ? ಪರಲೋಕದ ದೇವರಿಗೆ ನಾನು ಅಡ್ಡಬಿದ್ದು ಆರಾಧಿಸುವಾಗ ಏನು ಮಾಡಲಿ? ನಾನು ಕರ್ತನ ಬಳಿಗೆ ಬರುವಾಗ ಸರ್ವಾಂಗಹೋಮದೊಡನೆ ಒಂದು ವರುಷದ ಕರುವನ್ನು ತೆಗೆದುಕೊಂಡು ಬರಲೋ?
7 ದೇವರಾದ ಯೆಹೋವನು ಒಂದು ಸಾವಿರ ಟಗರು, ಹತ್ತುಸಾವಿರ ಎಣ್ಣೆಯ ಹೊಳೆಗಳಲ್ಲಿ ಸಂತೋಷಿಸುವನೋ? ನಾನು ಮಾಡಿದ ತಪ್ಪಿನ ಪರಿಹಾರಕ್ಕಾಗಿ ನನ್ನ ಚೊಚ್ಚಲ ಮಗನನ್ನು ಸಮರ್ಪಿಸಲೋ? ನನ್ನ ಶರೀರದಿಂದ ಬಂದ ಮಗನನ್ನು ನನ್ನ ಪಾಪಗಳಿಗಾಗಿ ಸಮರ್ಪಿಸಲೋ?
8 ಮನುಷ್ಯನೇ, ಒಳ್ಳೆಯದು ಏನೆಂದು ಯೆಹೋವನು ನಿನಗೆ ತಿಳಿಸಿದ್ದಾನೆ. ಯೆಹೋವನು ನಿನ್ನಿಂದ ಅಪೇಕ್ಷಿಸುವದೇನೆಂದರೆ, ಇತರರಿಗೆ ನೀನು ಅನ್ಯಾಯ ಮಾಡದಿರು. ದಯೆ ಮತ್ತು ನಂಬಿಗಸ್ತಿಕೆಗಳನ್ನು ಪ್ರೀತಿಸು. ದೀನತೆಯಿಂದ ನಿನ್ನ ದೇವರೊಂದಿಗೆ ಜೀವಿಸು. ನಿನ್ನ ಕಾಣಿಕೆಗಳಿಂದ ಆತನನ್ನು ಮೆಚ್ಚಿಸಲು ಪ್ರಯತ್ನಿಸದಿರು.
9 ಯೆಹೋವನ ಸ್ವರವು ಪಟ್ಟಣದಲ್ಲಿ ಗಟ್ಟಿಯಾಗಿ ಕೇಳಿಸುತ್ತದೆ. ಬುದ್ಧಿವಂತನು ಯೆಹೋವನ ನಾಮವನ್ನು ಗೌರವಿಸುವನು. ಆದುದರಿಂದ ಶಿಕ್ಷೆಯ ಬೆತ್ತದ ಕಡೆಗೆ ಲಕ್ಷ್ಯವಿಡು. ಬೆತ್ತವನ್ನು ಹಿಡುಕೊಂಡವನನ್ನೂ ಗೌರವಿಸು.
10 ಕದ್ದುಕೊಂಡ ಭಂಡಾರಗಳನ್ನು ದುಷ್ಟರು ಇನ್ನೂ ಗುಪ್ತವಾಗಿಡುವರೋ? ಕೆಟ್ಟ ಜನರು ತಮ್ಮ ಚಿಕ್ಕ ಅಳತೆಯಿಂದ ಜನರನ್ನು ಇನ್ನೂ ಮೋಸಪಡಿಸುವರೋ? ಹೌದು, ಅವೆಲ್ಲವೂ ನಡಿಯುತ್ತಲಿದೆ.
11 ಇನ್ನೂ ಮೋಸದ ಅಳತೆ ಪ್ರಮಾಣಗಳನ್ನು ಉಪಯೋಗಿಸುವ ದುಷ್ಟರನ್ನು ನಾನು ಕ್ಷಮಿಸಬೇಕೋ? ಚೀಲದೊಳಗೆ ಭಾರ ತುಂಬಿಸಿ ಮೋಸದ ಪ್ರಮಾಣದಲ್ಲಿ ವ್ಯಾಪಾರ ಮಾಡುವವರನ್ನು ನಾನು ಕ್ಷಮಿಸಬೇಕೋ?
12 ಪಟ್ಟಣದ ಧನಿಕರು ಕ್ರೂರವಾದ ಮತ್ತು ದುಷ್ಟತ್ವದ ಕಾರ್ಯಗಳನ್ನು ಇನ್ನೂ ಮಾಡುತ್ತಿದ್ದಾರೆ. ಪಟ್ಟಣದಲ್ಲಿರುವ ಜನರು ಇನ್ನೂ ಸುಳ್ಳು ಹೇಳುತ್ತಾರೆ. ಹೌದು, ಜನರು ತಮ್ಮ ಸುಳ್ಳನ್ನು ಪ್ರದರ್ಶಿಸುತ್ತಾರೆ.
13 ಆದುದರಿಂದ ನಾನು ನಿಮ್ಮನ್ನು ಶಿಕ್ಷಿಸಲು ಪ್ರಾರಂಭಿಸಿದೆನು. ನಿಮ್ಮ ಪಾಪಗಳ ದೆಸೆಯಿಂದ ನಿಮ್ಮನ್ನು ನಾಶಮಾಡುವೆನು.
14 ನೀವು ಉಣ್ಣುವಿರಿ ಆದರೆ ನಿಮ್ಮ ಹೊಟ್ಟೆ ತುಂಬದು. ನೀವು ಹೊಟ್ಟೆಗಿಲ್ಲದವರಂತೆ ಹಸಿವಿನಿಂದಲೇ ಇರುವಿರಿ. ನೀವು ಜನರನ್ನು ಸುರಕ್ಷಿತ ಸ್ಥಳಕ್ಕೆ ತರಲು ಪ್ರಯತ್ನಿಸುವಿರಿ. ಆದರೆ ನೀವು ರಕ್ಷಿಸಿದ ಜನರನ್ನು ಖಡ್ಗಧಾರಿಗಳು ಕೊಂದುಬಿಡುವರು. ಜನರು ನಿಮ್ಮನ್ನು ಹಿಡಿಯುವರು.
15 ನೀವು ಬೀಜ ಬಿತ್ತುವಿರಿ, ಆದರೆ ಪೈರು ಕೊಯ್ಯುವುದಿಲ್ಲ. ಆಲೀವ್ ಕಾಯಿಗಳನ್ನು ಗಾಣದಲ್ಲಿ ಹಾಕಿ ಎಣ್ಣೆ ತೆಗೆಯುವಿರಿ. ಆದರೆ ನಿಮಗೆ ಎಣ್ಣೆಯೇ ಸಿಗುವದಿಲ್ಲ. ನೀವು ದ್ರಾಕ್ಷಿ ಹಣ್ಣುಗಳನ್ನು ತೊಟ್ಟಿಯಲ್ಲಿ ಹಾಕಿ ತುಳಿಯುವಿರಿ, ಆದರೆ ಕುಡಿಯಲು ದ್ರಾಕ್ಷಾರಸವೇ ಸಿಗುವದಿಲ್ಲ.
16 ಯಾಕೆ ಹೀಗೆ? ಯಾಕೆಂದರೆ ನೀವು ಒಮ್ರಿಯ ಆಜ್ಞೆಯನ್ನು ಪರಿಪಾಲಿಸಿದಿರಿ. ಅಹಾಬನ ಮನೆಯವರು ಮಾಡುತ್ತಿದ್ದ ದುಷ್ಕೃತ್ಯಗಳನ್ನು ನೀವು ಮಾಡುತ್ತೀರಿ. ನೀವು ಅವರ ಬೋಧನೆಯನ್ನು ಅನುಸರಿಸುತ್ತೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಕೆಡವಲ್ಪಟ್ಟ ನಗರವನ್ನು ನೋಡಿದ ಜನರು ಆಶ್ಚರ್ಯದಿಂದ ಸಿಳ್ಳು ಹಾಕುವರು. ಆಗ ಬೇರೆ ಜನಾಂಗದವರು ನಿಮ್ಮ ಮೇಲೆ ಹೊರಿಸಿದ ಅವಮಾನವನ್ನು ನೀವು ಸಹಿಸಿಕೊಳ್ಳುವಿರಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×