Bible Versions
Bible Books

Numbers 12 (ERVKN) Easy to Read Version - Kannadam

1 ಮೋಶೆಯು ಇಥಿಯೋಪ್ಯದ ಸ್ತ್ರೀಯನ್ನು ಮದುವೆ ಮಾಡಿಕೊಂಡ ಕಾರಣ ಮಿರ್ಯಾಮಳೂ ಆರೋನನೂ ಮೋಶೆಗೆ ವಿರೋಧವಾಗಿ ಮಾತಾಡಿದರು.
2 ಅವರು, “ಯೆಹೋವನು ಮೋಶೆಯೊಡನೆ ಮಾತ್ರ ಮಾತಾಡಿದ್ದಾನೋ? ಆತನು ನಮ್ಮೊಡನೆಯೂ ಮಾತಾಡಿದನಲ್ಲವೇ?” ಅಂದರು. ಯೆಹೋವನು ಅವರ ಮಾತುಗಳನ್ನು ಕೇಳಿದನು.
3 (ಮೋಶೆಯು ಬಹಳ ದೀನನಾದ ವ್ಯಕ್ತಿ. ಅವನು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ದೀನನಾಗಿದ್ದನು.)
4 ಆದ್ದರಿಂದ ಕೂಡಲೇ ಯೆಹೋವನು, ಮೋಶೆ, ಆರೋನರ ಮತ್ತು ಮಿರ್ಯಾಮಳ ಸಂಗಡ ಮಾತಾಡಿ, “ನೀವು ಮೂವರು ದೇವದರ್ಶನಗುಡಾರಕ್ಕೆ ಬನ್ನಿ” ಎಂದು ಹೇಳಿದನು. ಆದ್ದರಿಂದ ಮೋಶೆ, ಆರೋನರು ಮತ್ತು ಮಿರ್ಯಾಮಳು ದೇವದರ್ಶನಗುಡಾರಕ್ಕೆ ಹೋದರು.
5 ಯೆಹೋವನು ಎತ್ತರವಾದ ಮೇಘದಲ್ಲಿ ಇಳಿದು ಬಂದು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿ ನಿಂತನು. ಯೆಹೋವನು ಆರೋನನನ್ನೂ ಮಿರ್ಯಾಮಳನ್ನೂ ಕರೆದನು. ಆರೋನನೂ ಮಿರ್ಯಾಮಳೂ ಹತ್ತಿರಕ್ಕೆ ಹೋದರು.
6 ದೇವರು, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ, ನಾನು ಅವನಿಗೆ ನನ್ನನ್ನು ದರ್ಶನದಲ್ಲಿ ಗೊತ್ತುಪಡಿಸಿಕೊಳ್ಳುವೆನು ಅಥವಾ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು.
7 ಆದರೆ ಮೋಶೆಯೊಡನೆ ನಾನು ರೀತಿ ಮಾಡುವುದಿಲ್ಲ. ಮೋಶೆಯು ನನ್ನ ನಂಬಿಗಸ್ತನಾದ ಸೇವಕನು. ಅವನ ಮೇಲೆ ನನಗೆ ಭರವಸೆಯಿದೆ.
8 ನಾನು ಅವನೊಂದಿಗೆ ಗೂಡಾರ್ಥದಿಂದ ಮಾತಾಡದೆ ನೇರವಾಗಿಯೂ ಸ್ಪಷ್ಟವಾಗಿಯೂ ಮಾತಾಡುತ್ತೇನೆ. ಅವನು ನನ್ನ ಸ್ವರೂಪವನ್ನೇ ನೋಡಬಲ್ಲನು. ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡಲು ನೀವು ಯಾಕೆ ಭಯಪಡಲಿಲ್ಲ?” ಎಂದು ಹೇಳಿದನು.
9 ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು ಹೊರಟುಹೋದನು.
10 ಮೇಘವು ಗುಡಾರದಿಂದ ಮೇಲಕ್ಕೆ ಎದ್ದಿತು. ಆರೋನನು ಹಿಂತಿರುಗಿ ಮಿರ್ಯಾಮಳನ್ನು ನೋಡಿದನು. ಆಕೆಯ ಚರ್ಮವು ಹಿಮದಂತೆ ಬೆಳ್ಳಗಾಗಿತ್ತು. ಆಕೆಗೆ ಭಯಂಕರವಾದ ಚರ್ಮರೋಗ ಹಿಡಿದಿತ್ತು.
11 ಆಗ ಆರೋನನು ಮೋಶೆಗೆ, “ಸ್ವಾಮೀ, ನಾವು ಮೂರ್ಖತನದಿಂದ ಮಾಡಿದ ಪಾಪಕ್ಕೆ ದಯವಿಟ್ಟು ನಮ್ಮನ್ನು ದಂಡಿಸಬೇಡ.
12 ಗರ್ಭದಲ್ಲೇ ಅರ್ಧ ಮಾಂಸ ಕೊಳೆತುಹೋಗಿ, ಹುಟ್ಟುವಾಗಲೇ ಸತ್ತ ಮಗುವಿನಂತೆ ಈಕೆಗೆ ಆಗದಂತೆ ದಯವಿಟ್ಟು ಕಾಪಾಡು” ಎಂದು ಬೇಡಿಕೊಂಡನು.
13 ಆದ್ದರಿಂದ ಮೋಶೆ ಯೆಹೋವನಿಗೆ ಪ್ರಾರ್ಥಿಸಿ, “ದೇವರೇ, ದಯಮಾಡಿ ಈಕೆಯನ್ನು ವಾಸಿಮಾಡು” ಎಂದು ಮೊರೆಯಿಟ್ಟನು.
14 ಅದಕ್ಕೆ ಯೆಹೋವನು, “ಆಕೆಯ ತಂದೆ ಮುಖದ ಮೇಲೆ ಉಗುಳಿದ್ದರೆ ಆಕೆ ಏಳು ದಿವಸ ನಾಚಿಕೆಯಿಂದ ಇರುತ್ತಿರಲಿಲ್ಲವೇ? ಹಾಗಾದರೆ ಆಕೆ ಏಳು ದಿವಸ ಪಾಳೆಯದ ಹೊರಗೆ ಇರಬೇಕು. ತರುವಾಯ ಆಕೆ ಪಾಳೆಯದೊಳಗೆ ಬರಬಹುದು” ಎಂದು ಉತ್ತರಿಸಿದನು.
15 ಆದಕಾರಣ ಅವರು ಮಿರ್ಯಾಮಳನ್ನು ಏಳು ದಿವಸಗಳವರೆಗೆ ಪಾಳೆಯದ ಹೊರಗೆ ಇಟ್ಟರು. ಆಕೆ ತಿರುಗಿ ಸೇರಿಕೊಳ್ಳುವ ತನಕ ಇಸ್ರೇಲರು ಪ್ರಯಾಣ ಮಾಡಲಿಲ್ಲ.
16 ಇದಾದನಂತರ, ಜನರು ಹಚೇರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×