Bible Versions
Bible Books

Proverbs 8 (ERVKN) Easy to Read Version - Kannadam

1 ಕೇಳಿ! ಜ್ಞಾನವೆಂಬಾಕೆಯೂ ವಿವೇಕವೆಂಬಾಕೆಯೂ “ಕಿವಿಗೊಡಿರಿ” ಎಂದು ನಿಮ್ಮನ್ನು ಕೂಗಿ ಕರೆಯುತ್ತಿದ್ದಾಳೆ.
2 ರಸ್ತೆಗಳ ಚೌಕಗಳ ಬಳಿಯಿರುವ ಗುಡ್ಡದ ಮೇಲ್ಭಾಗದಲ್ಲಿ ಆಕೆಯು ನಿಂತುಕೊಂಡಿದ್ದಾಳೆ.
3 ಪಟ್ಟಣದ ಹೆಬ್ಬಾಗಿಲುಗಳ ಬಳಿಯಿಂದಲೂ ತೆರೆದ ಬಾಗಿಲುಗಳ ಬಳಿಯಿಂದಲೂ ಕರೆಯುತ್ತಿದ್ದಾಳೆ.
4 “ಮನುಷ್ಯರೇ, ನಿಮ್ಮನ್ನೇ ಕರೆಯುತ್ತೇನೆ; ಎಲ್ಲಾ ಜನರನ್ನು ಕರೆಯುತ್ತೇನೆ.
5 ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ; ಜ್ಞಾನಹೀನರೇ ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
6 ಕೇಳಿರಿ! ಶ್ರೇಷ್ಠವಾದವುಗಳನ್ನೂ ಯಥಾರ್ಥವಾದುವುಗಳನ್ನೂ ನಿಮಗೆ ತಿಳಿಸುವೆನು.
7 ನನ್ನ ಮಾತುಗಳು ಸತ್ಯ. ನನ್ನ ತುಟಿಗಳಿಗೆ ದುಷ್ಟತನ ಅಸಹ್ಯ.
8 ನನ್ನ ಮಾತುಗಳು ನೀತಿಯ ಮಾತುಗಳಾಗಿವೆ. ನನ್ನ ಮಾತುಗಳಲ್ಲಿ ತಪ್ಪಾಗಲಿ ಕಪಟವಾಗಲಿ ಇಲ್ಲವೇ ಇಲ್ಲ.
9 ತಿಳುವಳಿಕೆಯುಳ್ಳವನಿಗೆ ನನ್ನ ಮಾತುಗಳು ಸ್ಪಷ್ಟವಾಗಿವೆ; ವಿವೇಕಿಗೆ ಯಥಾರ್ಥವಾಗಿವೆ.
10 ನನ್ನ ಉಪದೇಶವನ್ನು ಬೆಳ್ಳಿಗಿಂತಲೂ ನನ್ನ ಜ್ಞಾನೋಪದೇಶವನ್ನು ಶುದ್ಧ ಬಂಗಾರಕ್ಕಿಂತಲೂ ಉತ್ತಮವೆಂದು ಸ್ವೀಕರಿಸಿಕೊಳ್ಳಿ.
11 ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಮನುಷ್ಯನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.” ಜ್ಞಾನವು ಮಾಡುವುದೇನು
12 “ನಾನೇ ಜ್ಞಾನ. ನಾನು ಒಳ್ಳೆಯ ನ್ಯಾಯತೀರ್ಪಿನೊಡನೆ ವಾಸಿಸುವೆ. ನಾನು ವಿವೇಕದೊಡನೆಯೂ ಒಳ್ಳೆಯ ಆಲೋಚನೆಯೊಡನೆಯೂ ಇರುವೆನು.
13 ಯೆಹೋವನಲ್ಲಿ ಭಯಭಕ್ತಿಯಿರುವವನು ಪಾಪವನ್ನು ದ್ವೇಷಿಸುತ್ತಾನೆ. ಜ್ಞಾನವೆಂಬ ನಾನು ಗರ್ವವನ್ನೂ ಅಹಂಭಾವವನ್ನೂ ದುರ್ಮಾರ್ಗತನವನ್ನೂ ಸುಳ್ಳಾಡುವ ಬಾಯನ್ನೂ ದ್ವೇಷಿಸುತ್ತೇನೆ.
14 “ಒಳ್ಳೆಯ ಆಲೋಚನೆಗಳೂ ಒಳ್ಳೆಯ ತೀರ್ಪುಗಳೂ ನನ್ನವೇ. ವಿವೇಕವೂ ಸಾಮರ್ಥ್ಯವೂ ನನ್ನಲ್ಲಿವೆ.
15 ನನ್ನ ಸಹಾಯದಿಂದ ರಾಜರುಗಳು ರಾಜ್ಯವಾಳುವರು; ಅಧಿಪತಿಗಳು ನ್ಯಾಯವಾದ ಕಾನೂನುಗಳನ್ನು ಮಾಡುವರು.
16 ನನ್ನ ಸಹಾಯದಿಂದ ಅಧಿಪತಿಗಳು ಆಡಳಿತ ಮಾಡುವರು; ನಾಯಕರು ದೊರೆತನ ಮಾಡುವರು.
17 ನನ್ನನ್ನು ಪ್ರೀತಿಸುವವರನ್ನು ನಾನೂ ಪ್ರೀತಿಸುವೆನು; ಬಹಳವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18 ನನ್ನಲ್ಲಿಯೂ ಸಹ ಕೊಡಲು ಐಶ್ವರ್ಯವಿದೆ ಮತ್ತು ಘನತೆಯಿದೆ. ನಾನು ಶಾಶ್ವತವಾದ ಐಶ್ವರ್ಯವನ್ನೂ ಯಶಸ್ಸನ್ನೂ ಕೊಡುವೆನು.
19 ನಾನು ಕೊಡುವಂಥವುಗಳು ಬಂಗಾರಕ್ಕಿಂತಲೂ ಶ್ರೇಷ್ಠ. ನನ್ನ ಉಡುಗೊರೆಗಳು ಅಪ್ಪಟ ಬೆಳ್ಳಿಗಿಂತಲೂ ಉತ್ತಮ.
20 ನಾನು ನೀತಿಮಾರ್ಗದಲ್ಲಿಯೂ ನ್ಯಾಯಮಾರ್ಗದಲ್ಲಿಯೂ ನಡೆಯುತ್ತೇನೆ.
21 ನನ್ನನ್ನು ಪ್ರೀತಿಸುವವರಿಗೆ ನಾನು ಐಶ್ವರ್ಯವನ್ನು ಕೊಡುವೆನು. ಹೌದು, ಅವರ ಉಗ್ರಾಣಗಳನ್ನು ತುಂಬಿಸುವೆನು.
22 “ಯೆಹೋವನು “ಜ್ಞಾನ”ವೆಂಬ ನನ್ನನ್ನು ತನ್ನ ಸೃಷ್ಟಿ ಕ್ರಮದಲ್ಲಿ ಮೊದಲು ನಿರ್ಮಿಸಿದನು.
23 ನಾನು ಆದಿಯಲ್ಲಿ ನಿರ್ಮಾಣಗೊಂಡೆನು. ಪ್ರಪಂಚವು ಆರಂಭವಾಗುವುದಕ್ಕಿಂತ ಮೊದಲೇ ನಾನು ನಿರ್ಮಿತನಾದೆನು.
24 ನಾನು ಸಾಗರಗಳಿಗಿಂತ ಮೊದಲೇ ಜನಿಸಿದೆನು; ಬುಗ್ಗೆಗಳ ನೀರು ಉಂಟಾಗುವುದಕ್ಕಿಂತ ಮೊದಲೇ ಜನಿಸಿದೆನು.
25 ನಾನು ಪರ್ವತಗಳಿಗಿಂತ ಮೊದಲೇ ಜನಿಸಿದೆನು; ಬೆಟ್ಟಗಳಿಗಿಂತ ಮೊದಲೇ ಹುಟ್ಟಿದೆನು.
26 ಯೆಹೋವನು ಭೂಮಿಯನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಜ್ಞಾನವೆಂಬ ನಾನು ಹುಟ್ಟಿದೆನು. ನಾನು ಬಯಲುಗಳಿಗಿಂತ ಮೊದಲೇ ಹುಟ್ಟಿದೆನು. ಆತನು ಭೂಮಿಯ ಮೊದಲನೆ ಧೂಳಿನ ಕಣವನ್ನು ಉಂಟುಮಾಡುವುದಕ್ಕಿಂತ ಮೊದಲೇ ನಾನು ಹುಟ್ಟಿದೆನು.
27 “ಯೆಹೋವನು ಆಕಾಶವನ್ನು ಸೃಷ್ಟಿಸಿದ ಸಮಯದಲ್ಲಿ ಜ್ಞಾನವೆಂಬ ನಾನು ಅಲ್ಲಿದ್ದೆನು. ಆತನು ಸಾಗರದ ಎಲ್ಲೆಗಳನ್ನು ಗೊತ್ತುಪಡಿಸಿದಾಗ ಜ್ಞಾನವೆಂಬ ನಾನು ಅಲ್ಲಿದ್ದೆನು.
28 ಆತನು ಆಕಾಶದಲ್ಲಿ ಮೋಡಗಳನ್ನೂ ಸಾಗರಗಳಲ್ಲಿ ನೀರನ್ನೂ ನೆಲೆಗೊಳಿಸಿದಾಗ ನಾನು ಅಲ್ಲಿದ್ದೆನು.
29 ಆತನು ಸಮುದ್ರಗಳ ನೀರಿಗೆ ಎಲ್ಲೆಕಟ್ಟನ್ನು ಹಾಕಿದಾಗಲೂ ಭೂಮಿಗೆ ಅಸ್ತಿವಾರಗಳನ್ನು ಹಾಕಿದಾಗಲೂ ನಾನು ಅಲ್ಲಿದ್ದೆನು.
30 ನಾನು ಆತನ ಪಕ್ಕದಲ್ಲಿ ನಿಪುಣ ಕೆಲಸಗಾರನಂತಿದ್ದೆನು. ನಾನು ಪ್ರತಿದಿನವೂ ಸಂತೋಷಪಡುತ್ತಾ ಆತನ ಸನ್ನಿಧಿಯಲ್ಲಿ ಯಾವಾಗಲೂ ಉಲ್ಲಾಸಿಸುತ್ತಿದ್ದೆನು.
31 ಆತನು ಸೃಷ್ಟಿಸಿದ ಭೂಲೋಕದ ವಿಷಯದಲ್ಲಿ ಉಲ್ಲಾಸಿಸುತ್ತಾ ಮಾನವ ಸಂತಾನದ ವಿಷಯದಲ್ಲಿ ಹರ್ಷಿಸುತ್ತಾ ಇದ್ದೆನು.
32 “ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ! ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರಾಗಿದ್ದಾರೆ.
33 ನನ್ನ ಉಪದೇಶಗಳನ್ನು ಕೇಳಿ ಜ್ಞಾನವಂತರಾಗಿರಿ. ಕಿವಿಗೊಡದಿರಬೇಡಿ!
34 ನನಗೆ ಕಿವಿಗೊಡುವವನು ಧನ್ಯನಾಗಿದ್ದಾನೆ. ಅವನು ಪ್ರತಿದಿನ ನನ್ನ ಮನೆಬಾಗಿಲುಗಳ ಬಳಿಯಲ್ಲೂ ನನ್ನ ಬಾಗಿಲಿನ ನಿಲುವುಗಳ ಬಳಿಯಲ್ಲೂ ಕಾದುಕೊಂಡಿರುತ್ತಾನೆ.
35 ನನ್ನನ್ನು ಕಂಡುಕೊಂಡಂಥ ಜೀವವನ್ನು ಕಂಡುಕೊಳ್ಳುತ್ತಾನೆ. ಅವನಿಗೆ ಯೆಹೋವನ ಕೃಪೆಯು ದೊರೆಯುತ್ತದೆ.
36 ಆದರೆ ನನ್ನನ್ನು ಕಂಡುಕೊಳ್ಳಲಾರದವನು ತನಗೇ ಕೇಡುಮಾಡಿಕೊಳ್ಳುವನು. ನನ್ನನ್ನು ದ್ವೇಷಿಸುವ ಜನರೆಲ್ಲರೂ ಮರಣವನ್ನು ಪ್ರೀತಿಸುವರು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×