Bible Versions
Bible Books

Psalms 10 (ERVKN) Easy to Read Version - Kannadam

1 ಯೆಹೋವನೇ, ನೀನು ಬಹುದೂರವಾಗಿರುವುದೇಕೆ? ಕಷ್ಟಕಾಲದಲ್ಲಿ ನೀನು ಮರೆಯಾಗಿರುವುದೇಕೆ?
2 ದುಷ್ಟರು ಗರ್ವಿಷ್ಠರಾಗಿ ಬಡವರನ್ನು ಹಿಂದಟ್ಟಿ ಹೋಗುತ್ತಿದ್ದರೆ; ದುಷ್ಟರ ಕುಯುಕ್ತಿಯಲ್ಲಿ ಅವರು ಸಿಕ್ಕಿ ಬೀಳುವರು.
3 ಕೆಡುಕರು ತಮ್ಮ ಇಷ್ಟ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳುವರು. ದುರಾಶೆಯುಳ್ಳ ಅವರು ದೇವರನ್ನು ಶಪಿಸುತ್ತಾ ಆತನ ಮೇಲೆ ತಮಗಿರುವ ದ್ವೇಷವನ್ನು ತೋರ್ಪಡಿಸಿಕೊಳ್ಳುವರು.
4 ದುಷ್ಟರು ಗರ್ವದಿಂದ ದೇವರನ್ನು ತೊರೆದು ಬಿಡುವರು; ದುಷ್ಟಾಲೋಚನೆಗಳನ್ನು ಮಾಡುತ್ತಾ ದೇವರಿಲ್ಲದಂತೆ ವರ್ತಿಸುವರು.
5 ಅವರು ಕುಯುಕ್ತಿಗಳನ್ನೇ ಮಾಡುತ್ತಾ ದೇವರ ಕಟ್ಟಳೆಗಳನ್ನೂ ಬುದ್ಧಿಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೇವರ ವೈರಿಗಳು ಆತನ ಉಪದೇಶಗಳನ್ನು ಕಡೆಗಣಿಸುವರು.
6 ಅವರು, “ನಮ್ಮನ್ನು ಯಾವುದೂ ಕದಲಿಸದು; ನಮಗೆ ಕೇಡಾಗದಿರುವುದರಿಂದ ಸಂತೋಷವಾಗಿರೋಣ” ಎಂದುಕೊಂಡಿದ್ದಾರೆ.
7 ಅವರು ಯಾವಾಗಲೂ ಶಪಿಸುತ್ತಾರೆ; ಕೆಟ್ಟ ಮಾತುಗಳನ್ನು ಆಡುತ್ತಾರೆ; ಕುಯುಕ್ತಿಗಳನ್ನು ಮಾಡುತ್ತಾರೆ.
8 ಅವರು ನಿರಪರಾಧಿಗಳನ್ನು ಹಿಡಿದು ಕೊಲ್ಲಲು ಗುಪ್ತವಾದ ಸ್ಥಳಗಳಲ್ಲಿ ಅಡಗಿಕೊಂಡಿರುವರು; ಅಸಹಾಯಕರಿಗಾಗಿ ಎದುರು ನೋಡುವರು.
9 ಅವರು ಬೇಟೆಯಾಡುವ ಸಿಂಹಗಳಂತಿದ್ದಾರೆ. ಅವರು ನಿಸ್ಸಹಾಯಕರ ಮೇಲೆ ಆಕ್ರಮಣ ಮಾಡಿ ತಮ್ಮ ಬಲೆಗಳಲ್ಲಿ ಎಳೆದುಕೊಂಡು ಹೋಗುವರು.
10 ದುಷ್ಟರು ಕುಗ್ಗಿಹೋದವರನ್ನು ಮತ್ತೆಮತ್ತೆ ಜಜ್ಜಿ ಹಾಕುವರು.
11 ಆದ್ದರಿಂದ ನಿಸ್ಸಹಾಯಕರು, “ದೇವರು ನಮ್ಮನ್ನು ಮರೆತುಬಿಟ್ಟಿದ್ದ್ದಾನೆ! ನಮಗೆ ಶಾಶ್ವತವಾಗಿ ವಿಮುಖನಾಗಿದ್ದಾನೆ! ನಮಗೆ ಸಂಭವಿಸುತ್ತಿರುವುದನ್ನು ಆತನು ನೋಡುವುದಿಲ್ಲ!” ಎಂದು ಯೋಚಿಸತೊಡಗುವರು.
12 ಯೆಹೋವನೇ, ಎದ್ದೇಳು, ಕಾರ್ಯನಿರತನಾಗು! ದೇವರೇ, ದುಷ್ಟರನ್ನು ದಂಡಿಸು! ನಿಸ್ಸಹಾಯಕರನ್ನು ಮರೆತುಬಿಡಬೇಡ!
13 ದುಷ್ಟರು ದೇವರಿಗೆ ವಿರೋಧವಾಗಿ ಎದ್ದಿರುವುದೇಕೆ? ಆತನು ತಮ್ಮನ್ನು ದಂಡಿಸುವುದಿಲ್ಲವೆಂದು ಅವರು ಆಲೋಚಿಸಿಕೊಂಡಿರುವುದೇಕೆ?
14 ಯೆಹೋವನೇ, ದುಷ್ಟರ ಕ್ರೂರವಾದ ಕಾರ್ಯಗಳನ್ನೂ ದುಷ್ಕೃತ್ಯಗಳನ್ನೂ ನೀನು ಖಂಡಿತವಾಗಿ ನೋಡುವೆ. ಅವುಗಳನ್ನು ನೋಡಿ ಕಾರ್ಯನಿರತನಾಗು. ಅನೇಕ ತೊಂದರೆಗಳಲ್ಲಿ ಸಿಕ್ಕಿಕೊಂಡಿರುವವರು ಸಹಾಯಕ್ಕಾಗಿ ನಿನ್ನ ಬಳಿಗೆ ಬರುವರು. ಅನಾಥರಿಗೆ ಸಹಾಯ ಮಾಡುವವನು ನೀನೇ. ಆದ್ದರಿಂದ ಅವರಿಗೆ ಸಹಾಯಮಾಡು!
15 ಕೆಡುಕರನ್ನು ನಾಶಮಾಡು. ನಿನ್ನ ದೇಶದಿಂದ ಅವರನ್ನು ನಿರ್ಮೂಲಮಾಡು!
16 ಯೆಹೋವನು ಸದಾಕಾಲವೂ ರಾಜನಾಗಿರುವನು. ಆತನು ತನ್ನ ದೇಶದಿಂದ ಕೆಡುಕರನ್ನು ತೆಗೆದುಹಾಕುವನು.
17 ಯೆಹೋವನೇ, ಕುಗ್ಗಿಹೋದವರ ಕೋರಿಕೆಯನ್ನು ನೀನು ಕೇಳುವೆ. ಅವರ ಮೊರೆಗೆ ಕಿವಿಗೊಟ್ಟು ಅವರನ್ನು ಪ್ರೋತ್ಸಾಹಿಸುವೆ.
18 ಯೆಹೋವನೇ, ಅನಾಥರನ್ನೂ ಕುಗ್ಗಿಸಲ್ಪಟ್ಟವರನ್ನೂ ಸಂರಕ್ಷಿಸು. ಆಗ ಕೇವಲ ಮನುಷ್ಯರಿಂದ ಅವರಿಗೆ ಭಯವಾಗದು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×