Bible Versions
Bible Books

Psalms 104 (ERVKN) Easy to Read Version - Kannadam

1 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು! ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು! ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
2 ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
3 ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ. ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
4 ಗಾಳಿಯನ್ನು ನಿನ್ನ ದೂತರನ್ನಾಗಿಯೂ ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.
5 ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ ಅದೆಂದಿಗೂ ನಾಶವಾಗದು.
6 ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ. ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
7 ನೀನು ಆಜ್ಞಾಪಿಸಲು ಅದು ಓಡಿಹೋಯಿತು. ದೇವರೇ, ನೀನು ನೀರಿನತ್ತ ಘರ್ಜಿಸಲು ಅದು ಓಡಿಹೋಯಿತು.
8 ಜಲರಾಶಿಗಳು ಬೆಟ್ಟಗಳಿಂದ ಇಳಿದು ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
9 ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.
10 ನೀನು ನೀರನ್ನು ಬುಗ್ಗೆಗಳಿಂದ ತೊರೆಗಳಿಗೆ ಹರಿಯಮಾಡುವೆ. ಬೆಟ್ಟದ ತೊರೆಗಳ ಮೂಲಕ ನೀರು ಹರಿದು ಹೋಗುವುದು.
11 ತೊರೆಗಳು ಎಲ್ಲಾ ಕಾಡುಪ್ರಾಣಿಗಳಿಗೆ ನೀರನ್ನು ಕೊಡುತ್ತವೆ. ಕಾಡುಕತ್ತೆಗಳು ಸಹ ನೀರಿಗಾಗಿ ಅಲ್ಲಿಗೆ ಬರುತ್ತವೆ.
12 ಕಾಡುಪಕ್ಷಿಗಳು ಬಂದು ನೀರಿನ ಹಳ್ಳಗಳ ಬಳಿಯಲ್ಲಿ ವಾಸಿಸುತ್ತವೆ. ಸಮೀಪದ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.
13 ಆತನು ಬೆಟ್ಟಗಳ ಮೇಲೆ ಮಳೆಯನ್ನು ಸುರಿಸುವನು. ಆತನ ಸೃಷ್ಟಿಗಳು ಭೂಮಿಗೆ ಅಗತ್ಯವಾದ ಪ್ರತಿಯೊಂದನ್ನೂ ಒದಗಿಸುತ್ತವೆ.
14 ನೀನು ಪಶುಗಳಿಗೋಸ್ಕರ ಹುಲ್ಲನ್ನು ಬೆಳೆಯ ಮಾಡುವೆ. ನಾವು ದುಡಿದು ಬೆಳೆಸುವುದಕ್ಕಾಗಿ ಸಸಿಗಳನ್ನು ಕೊಟ್ಟಿರುವೆ. ಅವು ಬೆಳೆದು ನಮಗೆ ಆಹಾರವನ್ನು ಒದಗಿಸುತ್ತವೆ.
15 ನಮ್ಮನ್ನು ಸಂತೋಷಪಡಿಸುವ ದ್ರಾಕ್ಷಾರಸವನ್ನೂ ನಮ್ಮ ಚರ್ಮವನ್ನು ಮೃದುಗೊಳಿಸುವ ಎಣ್ಣೆಯನ್ನೂ ನಮ್ಮನ್ನು ಬಲಗೊಳಿಸುವ ಆಹಾರವನ್ನೂ ನಮಗೆ ದೇವರು ಕೊಡುತ್ತಾನೆ.
16 ಲೆಬನೋನಿನ ದೇವದಾರು ವೃಕ್ಷಗಳು ಯೆಹೋವನವೇ, ಅವುಗಳನ್ನು ನೆಟ್ಟಾತನು ಯೆಹೋವನೇ. ಆತನೇ ಅವುಗಳಿಗೆ ಬೇಕಾದ ನೀರನ್ನು ಒದಗಿಸುವನು.
17 ಪಕ್ಷಿಗಳು ಗೂಡುಗಳನ್ನು ಮರಗಳಲ್ಲಿ ಕಟ್ಟಿಕೊಳ್ಳುತ್ತವೆ. ದೊಡ್ಡ ಕೊಕ್ಕರೆಗಳು ತುರಾಯಿ ಮರಗಳಲ್ಲಿ ಜೀವಿಸುತ್ತವೆ.
18 ಎತ್ತರವಾದ ಬೆಟ್ಟಗಳು ಜಿಂಕೆಗಳಿಗೆ ವಾಸಸ್ಥಳವಾಗಿವೆ. ದೂಡ್ಡ ಬಂಡೆಗಳು ಬೆಟ್ಟದ ಮೊಲಗಳಿಗೆ ಆಶ್ರಯ ಸ್ಥಾನಗಳಾಗಿವೆ.
19 ವಿಶೇಷಕಾಲಗಳ ಸೂಚನೆಗಾಗಿ ನೀನು ನಮಗೆ ಚಂದ್ರನನ್ನು ಕೊಟ್ಟಿರುವೆ. ಸೂರ್ಯನಿಗೆ ತಾನು ಮುಳುಗತಕ್ಕ ಸಮಯವು ಯಾವಾಗಲೂ ತಿಳಿದಿದೆ.
20 ನೀನು ಕತ್ತಲೆಯನ್ನು ರಾತ್ರಿಯನ್ನಾಗಿ ಮಾಡಿದೆ. ಕಾಡುಪ್ರಾಣಿಗಳು ರಾತ್ರಿಯಲ್ಲಿ ಹೊರಬಂದು ಸುತ್ತಮುತ್ತ ಓಡಾಡುತ್ತವೆ.
21 ಸಿಂಹಗಳು ಬೇಟೆಯಾಡುವಾಗ ಆಹಾರಕ್ಕಾಗಿ ದೇವರನ್ನು ಕೇಳಿಕೊಳ್ಳುತ್ತಿವೆಯೊ ಎಂಬಂತೆ ಘರ್ಜಿಸುತ್ತವೆ.
22 ಸೂರ್ಯನು ಮೇಲೇರುವಾಗ, ಪ್ರಾಣಿಗಳು ತಮ್ಮ ಗುಹೆಗಳಿಗೆ ಹೋಗಿ ವಿಶ್ರಮಿಸಿಕೊಳ್ಳುತ್ತವೆ.
23 ಬಳಿಕ ಜನರು ಕೆಲಸ ಕಾರ್ಯಗಳಿಗಾಗಿ ಹೊರಟು ಸಾಯಂಕಾಲದವರೆಗೂ ದುಡಿಯುವರು.
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ. ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ. ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು. ಅದರೊಳಗೆ ಅನೇಕ ಬಗೆಯ ದೊಡ್ಡಜೀವಿಗಳೂ ನಾನಾ ಬಗೆಯ ಚಿಕ್ಕಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ ಹಡಗು ಸಮುದ್ರದ ಮೇಲೆ ಸಂಚರಿಸುವುದು.
27 ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ. ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ. ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ ಅವು ಭಯಗೊಳ್ಳುತ್ತವೆ. ಅವುಗಳ ಶ್ವಾಸವು ಹೋಗಿ ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ. ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.
31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ! ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು, ಭೂಮಿಯು ನಡುಗುವುದು; ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು, ಅವು ಜ್ವಾಲಾಮುಖಿಗಳಾಗುತ್ತವೆ.
33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು. ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ವಿಷಯಗಳು ಆತನನ್ನು ಸಂತೋಷಗೊಳಿಸಲಿ. ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ. ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ. ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು! ಯೆಹೋವನನ್ನು ಕೊಂಡಾಡು!
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×