Bible Versions
Bible Books

Romans 4 (ERVKN) Easy to Read Version - Kannadam

1 ಹಾಗಾದರೆ, ನಮ್ಮ ಪಿತೃವಾದ ಅಬ್ರಹಾಮನ ಬಗ್ಗೆ ನಾವು ಏನು ಹೇಳೋಣ? ಅವನು ನಂಬಿಕೆಯ ಬಗ್ಗೆ ಏನು ಕಲಿತುಕೊಂಡನು?
2 ಅವನು ತನ್ನ ಕ್ರಿಯೆಗಳಿಂದ ನೀತಿವಂತನಾಗಿದ್ದರೆ ಹೊಗಳಿಕೊಳ್ಳಲು ಅವನಿಗೆ ಕಾರಣವಿರುತ್ತಿತ್ತು. ಆದರೆ ಅಬ್ರಹಾಮನು ದೇವರ ಮುಂದೆ ಹೊಗಳಿಕೊಳ್ಳಲು ಆಗಲಿಲ್ಲ.
3 ”ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಇದು ಅಬ್ರಹಾಮನನ್ನು ನೀತಿವಂತನನ್ನಾಗಿ ಮಾಡಿತು” ಎಂದು ಪವಿತ್ರ ಗ್ರಂಥವು ಹೇಳುತ್ತದೆ.
4 ದುಡಿದವನಿಗೆ ದೊರೆಯುವ ಸಂಬಳ ಉಡುಗೊರೆಯಲ್ಲ, ಅದು ಅವನಿಗೆ ಸಲ್ಲತಕ್ಕದ್ದೇ ಆಗಿದೆ.
5 ಆದರೆ ಒಬ್ಬನು ತಾನು ಮಾಡುವ ಯಾವುದೇ ಕಾರ್ಯದ ಮೂಲಕವಾಗಲಿ ತನ್ನನ್ನು ನೀತಿವಂತನನ್ನಾಗಿ ಮಾಡಿಕೊಳ್ಳಲಾರನು. ಆದ್ದರಿಂದ ವ್ಯಕ್ತಿ ದೇವರಲ್ಲಿ ನಂಬಿಕೆ ಇಡಲೇಬೇಕು. ಆಗ ದೇವರು ವ್ಯಕ್ತಿಯ ನಂಬಿಕೆಯನ್ನು ಸ್ವೀಕರಿಸಿಕೊಂಡು ಅವನನ್ನು ನೀತಿವಂತನನ್ನಾಗಿ ಮಾಡುವನು. ದೇವರು ದುಷ್ಟರನ್ನು ಸಹ ನೀತಿವಂತರನ್ನಾಗಿ ಮಾಡುವನು.
6 ದೇವರು ಒಬ್ಬನ ಒಳ್ಳೆಯ ಕಾರ್ಯಗಳನ್ನು ಲಕ್ಷಿಸದೆ ಅವನನ್ನು ನೀತಿವಂತನೆಂದು ಒಪ್ಪಿಕೊಂಡರೆ ಅವನು ನಿಜವಾಗಿಯೂ ಭಾಗ್ಯವಂತನೆಂದು ದಾವೀದನು ಸಹ ಹೇಳಿದ್ದಾನೆ:
7 ”ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಅಪರಾಧಗಳು ಮುಚ್ಚಲ್ಪಟ್ಟಿವೆಯೋ ಅವರು ನಿಜವಾಗಿಯೂ ಭಾಗ್ಯವಂತರು!
8 ಪ್ರಭುವು ಯಾವನ ಪಾಪವನ್ನು ಪರಿಗಣಿಸುವುದಿಲ್ಲವೋ ಅವನು ನಿಜವಾಗಿಯೂ ಭಾಗ್ಯವಂತನು!” ಕೀರ್ತನೆ 32:1-2
9 ಭಾಗ್ಯವಿರುವುದು ಸುನ್ನತಿ ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು.
10 ಆದರೆ ಇದು ಯಾವಾಗ ಆಯಿತು? ದೇವರು ಅಬ್ರಹಾಮನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೋ ಅಥವಾ ಸುನ್ನತಿಯಾದಮೇಲೋ? ದೇವರು ಅವನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೇ.
11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು.
12 ಅಲ್ಲದೆ ಸುನ್ನತಿ ಮಾಡಿಸಿಕೊಂಡಿರುವ ಜನರಿಗೂ ಸಹ ಅಬ್ರಹಾಮನು ತಂದೆಯಾಗಿದ್ದಾನೆ. ಆದರೆ ಅವನನ್ನು ಅವರ ತಂದೆಯನ್ನಾಗಿ ಮಾಡುವಂಥದ್ದು ಅವರ ಸುನ್ನತಿಯಲ್ಲ. ನಮ್ಮ ತಂದೆಯಾದ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವ ಮೊದಲು ಹೊಂದಿದ್ದ ನಂಬಿಕೆಗನುಸಾರವಾಗಿ ಅವರು ಜೀವಿಸಿದರೆ ಮಾತ್ರ ಅವನು ಅವರ ತಂದೆಯಾಗಿದ್ದಾನೆ.
13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ವಾಗ್ದಾನವನ್ನು ಹೊಂದಿಕೊಂಡನು.
14 ದೇವರು ವಾಗ್ದಾನ ಮಾಡಿದವುಗಳನ್ನು ಜನರು ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಹೊಂದಿಕೊಳ್ಳಬಲ್ಲವರಾಗಿದ್ದರೆ, ನಂಬಿಕೆಯು ನಿಷ್ಪ್ರಯೋಜಕವಾಗಿದೆ. ಅಲ್ಲದೆ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವೂ ನಿಷ್ಪ್ರಯೋಜಕವಾಗಿದೆ.
15 ಏಕೆಂದರೆ ಧರ್ಮಶಾಸ್ತ್ರಕ್ಕೆ ವಿಧೇಯರಾಗದೆ ಹೋದಾಗ, ಧರ್ಮಶಾಸ್ತ್ರವು ದೇವರ ಕೋಪವನ್ನು ಮಾತ್ರ ತರುತ್ತದೆ. ಆದರೆ ಧರ್ಮಶಾಸ್ತ್ರವು ಇಲ್ಲದಿದ್ದರೆ ಅವಿಧೇಯರಾಗುವುದಕ್ಕೆ ಏನೂ ಇರುವುದಿಲ್ಲ.
16 ಆದಕಾರಣ ಜನರು ನಂಬಿಕೆಯ ಮೂಲಕವಾಗಿ ದೇವರ ವಾಗ್ದಾನವನ್ನು ಹೊಂದಿಕೊಳ್ಳುವರು. ವಾಗ್ದಾನವು ಉಚಿತ ಕೊಡುಗೆಯಾಗಬೇಕೆಂತಲೇ ಹೀಗಾಯಿತು. ವಾಗ್ದಾನವು ಉಚಿತ ಕೊಡುಗೆಯಾಗಿದ್ದರೆ, ಅಬ್ರಹಾಮನ ಜನರೆಲ್ಲರೂ ವಾಗ್ದಾನವನ್ನು ಹೊಂದಿಕೊಳ್ಳುವರು. ವಾಗ್ದಾನವನ್ನು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿ ಜೀವಿಸುವ ಜನರಿಗೆ ಮಾತ್ರವಲ್ಲ, ಅಬ್ರಹಾಮನಂತೆ ನಂಬಿಕೆಯಲ್ಲಿ ಜೀವಿಸುವ ಎಲ್ಲರಿಗೂ ಕೊಡಲಾಗಿದೆ. ಅಬ್ರಹಾಮನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ.
17 ”ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ” ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಇದು ದೇವರ ಸನ್ನಿಧಿಯಲ್ಲಿ ಸತ್ಯವಾಗಿದೆ. ಸತ್ತವರಿಗೆ ಜೀವವನ್ನು ಕೊಡುವವನೂ ಇನ್ನೂ ಸಂಭವಿಸಿಲ್ಲದ ಕಾರ್ಯಗಳನ್ನು ಮಾಡುವವನೂ ಆಗಿರುವ ದೇವರನ್ನು ಅಬ್ರಹಾಮನು ನಂಬಿದನು.
18 ಅಬ್ರಹಾಮನಿಗೆ ಮಕ್ಕಳಾಗುವ ಆಸ್ಪದವೇ ಇರಲಿಲ್ಲ. ಆದರೂ ಅವನು ದೇವರನ್ನು ನಂಬಿ ತನ್ನ ನಿರೀಕ್ಷೆಯಲ್ಲಿಯೇ ಮುಂದುವರೆದನು. ಆದಕಾರಣವೇ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. ದೇವರು ಅವನಿಗೆ, “ನೀನು ಅನೇಕ ಜನಾಂಗಗಳನ್ನು ಪಡೆಯುವೆ” ಎಂದು ಹೇಳಿದ್ದಂತೆಯೇ ಇದಾಯಿತು.
19 ಅಬ್ರಹಾಮನು ಸುಮಾರು ನೂರು ವರ್ಷದವನಾಗಿದ್ದರಿಂದ ಅವನ ದೇಹವು ದುರ್ಬಲವಾಗಿತ್ತು. ಆದಕಾರಣ ಅವನು ಮಕ್ಕಳನ್ನು ಪಡೆಯುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಸಾರಳಿಗೂ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಅಬ್ರಹಾಮನು ಇದರ ಬಗ್ಗೆ ಆಲೋಚಿಸಿದನು. ಆದರೂ ದೇವರ ಮೇಲೆ ಅವನಿಗಿದ್ದ ನಂಬಿಕೆಯು ಬಲಹೀನವಾಗಲಿಲ್ಲ.
20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಸಂಶಯಪಡಲಿಲ್ಲ ಮತ್ತು ತನ್ನ ನಂಬಿಕೆಯನ್ನು ಕೊನೆಗೊಳಿಸಲಿಲ್ಲ. ಅವನು ತನ್ನ ನಂಬಿಕೆಯಲ್ಲಿ ಬಲವಾಗಿ ಬೆಳೆದನು ಮತ್ತು ದೇವರಿಗೆ ಸ್ತೋತ್ರ ಸಲ್ಲಿಸಿದನು.
21 ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು.
22 ಆದ್ದರಿಂದ, “ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಅದು ಅವನನ್ನು ನೀತಿವಂತನನ್ನಾಗಿ ಮಾಡಿತು.”
23 ಮಾತುಗಳು ಬರೆಯಲ್ಪಟ್ಟಿರುವುದು ಅಬ್ರಹಾಮನಿಗೆ ಮಾತ್ರವಲ್ಲ.
24 ನಮಗಾಗಿಯೂ ಬರೆಯಲ್ಪಟ್ಟಿವೆ. ನಾವು ನಂಬುವುದರಿಂದ ದೇವರು ನಮ್ಮನ್ನು ಸಹ ಸ್ವೀಕರಿಸಿಕೊಳ್ಳುವನು. ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನಲ್ಲಿ (ದೇವರಲ್ಲಿ) ನಾವು ನಂಬಿಕೆ ಇಡುತ್ತೇವೆ.
25 ನಮ್ಮ ಪಾಪಗಳ ದೆಸೆಯಿಂದ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು. ನಮ್ಮನ್ನು ನೀತಿವಂತರನ್ನಾಗಿ ಮಾಡುವುದಕ್ಕಾಗಿ ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಲಾಯಿತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×