Bible Versions
Bible Books

Romans 5 (ERVKN) Easy to Read Version - Kannadam

1 ಹೀಗಿರಲಾಗಿ, ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ. ಆದಕಾರಣ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿದೆ.
2 ಈಗ ನಾವು ಆನಂದಿಸುತ್ತಿರುವ ದೇವರ ಕೃಪಾಶ್ರಯಕ್ಕೆ ಕ್ರಿಸ್ತನೇ ನಮ್ಮನ್ನು ನಮ್ಮ ನಂಬಿಕೆಯ ಮೂಲಕ ತಂದಿದ್ದಾನೆ. ದೇವರ ಮಹಿಮೆಯನ್ನು ಹೊಂದುವೆವು ಎಂಬ ನಿರೀಕ್ಷೆಯು ನಮಗಿರುವುದರಿಂದ ನಾವು ಬಹು ಸಂತೋಷವಾಗಿದ್ದೇವೆ.
3 ಅಲ್ಲದೆ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷವಾಗಿದ್ದೇವೆ. ಏಕೆಂದರೆ, ಕಷ್ಟಸಂಕಟಗಳು ನಮ್ಮಲ್ಲಿ ಹೆಚ್ಚು ತಾಳ್ಮೆಯನ್ನು ಉಂಟುಮಾಡುತ್ತವೆ.
4 ನಾವು ಬಲಶಾಲಿಗಳಾಗಿದ್ದೇವೆ ಎಂಬುದಕ್ಕೆ ತಾಳ್ಮೆಯೇ ಆಧಾರ. ನಮಗೆ ನಿರೀಕ್ಷೆಯನ್ನು ಕೊಡುವಂಥದ್ದು ಆಧಾರವೇ.
5 ನಮ್ಮ ನಿರೀಕ್ಷೆಯು ನಮ್ಮನ್ನು ಎಂದಿಗೂ ನಿರಾಶರನ್ನಾಗಿ ಮಾಡುವುದಿಲ್ಲ. ಅದು ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ದೇವರು ನಮಗೆ ಉಡುಗೊರೆಯಾಗಿ ಕೊಟ್ಟಿರುವ ಪವಿತ್ರಾತ್ಮನ ಮೂಲಕ ತನ್ನ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾನೆ.
6 ನಾವು ಬಲಹೀನರೂ ದೇವರಿಗೆ ವಿರೋಧವಾಗಿ ಜೀವಿಸುವವರೂ ಆಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ನಮಗೋಸ್ಕರ ಪ್ರಾಣಕೊಟ್ಟನು.
7 ನೀತಿವಂತನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಒಬ್ಬನು ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಾಗಿರುವ ಒಬ್ಬನಿಗಾಗಿ ಪ್ರಾಣಕೊಡಲು ಒಬ್ಬನು ಧೈರ್ಯಮಾಡಿದರೂ ಮಾಡಬಹುದು.
8 ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ.
9 ನಾವು ಕ್ರಿಸ್ತನ ರಕ್ತದ ಮೂಲಕವಾಗಿ ನೀತಿವಂತರಾಗಿದ್ದೇವೆ. ಆದ್ದರಿಂದ ಆತನ ಮೂಲಕ ದೇವರ ಕೋಪದಿಂದ ಖಂಡಿತವಾಗಿ ತಪ್ಪಿಸಿಕೊಳ್ಳುತ್ತೇವೆ.
10 ಅಂದರೆ, ನಾವು ದೇವರ ಶತ್ರುಗಳಾಗಿದ್ದಾಗಲೇ, ದೇವರು ತನ್ನ ಮಗನ ಮರಣದ ಮೂಲಕವಾಗಿ ನಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೆ. ಈಗ ನಾವು ದೇವರ ಸ್ನೇಹಿತರಾಗಿರುವುದರಿಂದ ದೇವರು ತನ್ನ ಮಗನ ಪ್ರಾಣದ ಮೂಲಕ ನಮ್ಮನ್ನು ರಕ್ಷಿಸುವುದು ಮತ್ತಷ್ಟು ನಿಶ್ಚಯವಾಗಿದೆ.
11 ಇಷ್ಟು ಮಾತ್ರವಲ್ಲದೆ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಾವು ದೇವರಲ್ಲಿ ಹರ್ಷಿಸುತ್ತೇವೆ. ಈಗ ನಾವು ದೇವರ ಸ್ನೇಹಿತರಾಗಿರುವುದು ಯೇಸುವಿನಿಂದಲೇ.
12 ಒಬ್ಬ ಮನುಷ್ಯನು (ಆದಾಮ) ಮಾಡಿದ ಕೃತ್ಯದಿಂದ ಪಾಪವು ಲೋಕಕ್ಕೆ ಬಂದಿತು. ಪಾಪದೊಂದಿಗೆ ಮರಣವೂ ಬಂದಿತು. ಆದಕಾರಣವೇ ಎಲ್ಲಾ ಜನರು ಸಾಯಲೇಬೇಕು; ಏಕೆಂದರೆ ಎಲ್ಲಾ ಜನರು ಪಾಪ ಮಾಡಿದ್ದಾರೆ.
13 ಮೋಶೆಯ ಧರ್ಮಶಾಸ್ತ್ರಕ್ಕಿಂತ ಮೊದಲೇ ಪಾಪವು ಲೋಕದಲ್ಲಿತ್ತು. ಧರ್ಮಶಾಸ್ತ್ರವು ಇಲ್ಲದಿದ್ದರೆ, ದೇವರು ಜನರ ಪಾಪವನ್ನು ಪರಿಗಣಿಸುವುದಿಲ್ಲ.
14 ಆದರೆ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೆ ಎಲ್ಲಾ ಜನರು ಸಾಯಲೇಬೇಕಾಯಿತು. ಆದಾಮನು ಪಾಪ ಮಾಡಿದ್ದರಿಂದ ಸತ್ತನು. ದೇವರ ಆಜ್ಞೆಗೆ ಅವಿಧೇಯನಾದದ್ದೇ ಪಾಪ. ಆದರೆ ಆದಾಮನು ಮಾಡಿದ ಪಾಪಕ್ಕೆ ಸರಿಸಮಾನವಾದ ಪಾಪವನ್ನು ಮಾಡಿಲ್ಲದವರು ಸಹ ಸಾಯಬೇಕಾಯಿತು. ಆದಾಮನು ಮುಂದಿನ ಕಾಲದಲ್ಲಿ ಬರಲಿದ್ದ ಒಬ್ಬಾತನಿಗೆ (ಕ್ರಿಸ್ತನಿಗೆ) ಮುನ್ಸೂಚನೆಯಾಗಿದ್ದನು.
15 ಆದರೆ ದೇವರ ಉಚಿತ ಕೊಡುಗೆಯು ಆದಾಮನ ಪಾಪದಂತಿಲ್ಲ. ಒಬ್ಬನು ಮಾಡಿದ ಪಾಪದ ದೆಸೆಯಿಂದಾಗಿ ಅನೇಕ ಜನರು ಸತ್ತರು. ಆದರೆ ಜನರು ದೇವರಿಂದ ಪಡೆದುಕೊಂಡ ಕೃಪೆಯು ಅದಕ್ಕಿಂತ ಬಹು ದೊಡ್ಡದಾಗಿದೆ. ಯೇಸು ಕ್ರಿಸ್ತನೆಂಬ ಒಬ್ಬ ಪುರುಷನ ಕೃಪೆಯ ಮೂಲಕ ದೇವರು ಉಚಿತವಾಗಿ ಕೊಡುವ ؅ಜೀವ؆ವನ್ನು ಅನೇಕ ಜನರು ಹೊಂದಿಕೊಂಡರು.
16 ಆದಾಮನು ಒಮ್ಮೆ ಪಾಪಮಾಡಿದ ಮೇಲೆ ಅವನಿಗೆ ಅಪರಾಧಿ ಎಂದು ತೀರ್ಪು ನೀಡಲಾಯಿತು. ಆದರೆ ದೇವರ ಉಚಿತವಾದ ಕೊಡುಗೆ ಅದಕ್ಕೆ ತದ್ವಿರುದ್ಧವಾಗಿದೆ. ಅನೇಕ ಪಾಪಗಳ ದೆಸೆಯಿಂದ ದೇವರ ಉಚಿತವಾದ ಕೊಡುಗೆ ಬಂದಿತು. ಉಚಿತ ಕೊಡುಗೆ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ.
17 ಒಬ್ಬನು ಪಾಪ ಮಾಡಿದನು, ಒಬ್ಬನ ದೆಸೆಯಿಂದ ಮರಣವು ಎಲ್ಲಾ ಜನರ ಮೇಲೆ ಆಳ್ವಿಕೆ ನಡೆಸಿತು. ಆದರೆ ಈಗ ಕೆಲವು ಜನರು ದೇವರ ಪೂರ್ಣ ಕೃಪೆಯನ್ನು ಮತ್ತು ನೀತಿವಂತರನ್ನಾಗಿ ಮಾಡುವ ಆತನ ಉಚಿತವಾದ ಮಹಾ ಕೊಡುಗೆಯನ್ನು ಸ್ವೀಕರಿಸಿಕೊಳ್ಳುವರು. ನಿಶ್ಚಯವಾಗಿಯು ಅವರು ಯೇಸು ಕ್ರಿಸ್ತನೆಂಬ ಒಬ್ಬ ಪುರುಷನ ಮೂಲಕ, ನಿಜವಾದ ಜೀವವನ್ನು ಹೊಂದಿಕೊಳ್ಳುವರು ಮತ್ತು ಆಳುವರು.
18 ಹೀಗಿರಲಾಗಿ, ಆದಾಮನ ಒಂದು ಪಾಪವು ಎಲ್ಲಾ ಜನರಿಗೆ ಮರಣದಂಡನೆಯನ್ನು ತಂದಿತು. ಆದರೆ ಅದೇ ರೀತಿಯಲ್ಲಿ, ಕ್ರಿಸ್ತನು ಮಾಡಿದ ಒಂದೇ ಒಳ್ಳೆಯ ಕಾರ್ಯವು, ಎಲ್ಲಾ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. ಮತ್ತು ಜನರಿಗೆ ಅದು ನಿಜವಾದ ಜೀವವನ್ನು ತರುತ್ತದೆ.
19 ಒಬ್ಬನು ದೇವರಿಗೆ ಅವಿಧೇಯನಾದ್ದರಿಂದ ಎಲ್ಲಾ ಜನರು ಪಾಪಿಗಳಾದರು. ಆದರೆ ಅದೇ ರೀತಿಯಲ್ಲಿ, ಒಬ್ಬನು ದೇವರಿಗೆ ವಿಧೇಯನಾದ್ದರಿಂದ ಎಲ್ಲರೂ ನೀತಿವಂತರಾಗುವರು.
20 ಧರ್ಮಶಾಸ್ತ್ರ ಬಂದದ್ದರಿಂದ ಜನರಲ್ಲಿ ಹೆಚ್ಚು ಪಾಪಗಳು ಕಂಡುಬಂದವು. ಆದರೆ ಜನರು ಹೆಚ್ಚು ಪಾಪಗಳನ್ನು ಮಾಡಿದಾಗ, ದೇವರು ಅವರಿಗೆ ಹೆಚ್ಚು ಕೃಪೆಯನ್ನು ದಯಪಾಲಿಸಿದನು.
21 ಒಂದು ಕಾಲದಲ್ಲಿ ಪಾಪವು ಮರಣದ ಮೂಲಕ ನಮ್ಮ ಮೇಲೆ ಆಳ್ವಿಕೆ ನಡೆಸಿತು. ಆದರೆ ದೇವರು ಜನರನ್ನು ನೀತಿವಂತರನ್ನಾಗಿ ಮಾಡಬೇಕೆಂದು ತನ್ನ ಕೃಪೆಯನ್ನು ಹೆಚ್ಚಾಗಿ ಅನುಗ್ರಹಿಸಿದನು. ಕೃಪೆಯು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ನಿತ್ಯಜೀವವನ್ನು ತರುತ್ತದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×