Bible Versions
Bible Books

Song of Solomon 5 (ERVKN) Easy to Read Version - Kannadam

1 ನನ್ನ ಪ್ರಿಯೇ, ನನ್ನ ವಧುವೇ, ನನ್ನ ತೋಟವನ್ನು ಪ್ರವೇಶಿಸಿದ್ದೇನೆ. ನನ್ನ ಸುಗಂಧ ದ್ರವ್ಯದೊಡನೆ ಗೋಲರಸವನ್ನು ಶೇಖರಿಸಿದ್ದೇನೆ. ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿದ್ದೇನೆ. ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. ಸ್ನೇಹಿತರೇ, ತಿನ್ನಿರಿ, ಕುಡಿಯಿರಿ! ಪ್ರೀತಿಯಿಂದ ಮತ್ತರಾಗಿ!
2 ನಾನು ನಿದ್ರೆಮಾಡುತ್ತಿರುವಾಗಲೂ ಹೃದಯ ಎಚ್ಚರವಾಗಿರುವುದು. ನನ್ನ ಪ್ರಿಯನು ಬಾಗಿಲು ತಟ್ಟುತ್ತಿರುವುದು ನನಗೆ ಕೇಳುತ್ತಿದೆ. “ನನ್ನ ಪ್ರಿಯಳೇ, ನನ್ನ ಕಾಂತಳೇ, ನನ್ನ ಪಾರಿವಾಳವೇ, ನನ್ನ ನಿರ್ಮಲೆಯೇ, ಬಾಗಿಲು ತೆರೆ! ನನ್ನ ತಲೆಯು ಇಬ್ಬನಿಯಿಂದ ತೇವವಾಗಿದೆ; ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತೇವವಾಗಿದೆ.”
3 “ನಾನು ನನ್ನ ಮೇಲಂಗಿಯನ್ನು ತೆಗೆದಿದ್ದೇನೆ; ಅದನ್ನು ಮತ್ತೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲ. ನಾನು ನನ್ನ ಪಾದಗಳನ್ನು ತೊಳೆದಿದ್ದೇನೆ. ಅವುಗಳನ್ನು ಮತ್ತೆ ಕೊಳೆ ಮಾಡಲು ನನಗೆ ಇಷ್ಟವಿಲ್ಲ.”
4 ನನ್ನ ಪ್ರಿಯನು ಬಾಗಿಲ ಚಿಲಕದ ರಂಧ್ರದಲ್ಲಿ ಕೈ ನೀಡಿದಾಗ ಅವನ ಮೇಲೆ ನನಗೆ ಮರುಕವಾಯಿತು.
5 ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ನಾನು ಎದ್ದಾಗ ಅಗುಳಿಯ ಹಿಡಿಗಳ ಮೇಲೆ ನನ್ನ ಕೈಗಳಿಂದ ಗೋಲರಸವೂ ನನ್ನ ಬೆರಳುಗಳಿಂದ ಸುವಾಸನೆಯ ಗೋಲರಸವೂ ತೊಟ್ಟಿಕ್ಕಿದವು.
6 ನಾನು ನನ್ನ ಪ್ರಿಯನಿಗಾಗಿ ಕದತೆರೆಯುವಷ್ಟರಲ್ಲಿ ನನ್ನ ಪ್ರಿಯನು ಹೊರಟುಹೋಗಿದ್ದನು! ಅವನು ಇಲ್ಲದಿರುವುದನ್ನು ಕಂಡು ನನ್ನ ಹೃದಯವು ಕುಸಿದುಹೋಯಿತು. ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ. ನಾನು ಅವನಿಗಾಗಿ ಕೂಗಿದರೂ ಅವನು ಉತ್ತರಿಸಲಿಲ್ಲ.
7 ನಗರದಲ್ಲಿ ಗಸ್ತುತಿರುಗುವ ಕಾವಲುಗಾರರು ನನ್ನನ್ನು ಕಂಡು ಹೊಡೆದು ಗಾಯಮಾಡಿದರು. ಕೋಟೆಯ ಕಾವಲುಗಾರರು ನನ್ನ ಮೇಲ್ಹೋದಿಕೆಯನ್ನು ತೆಗೆದುಕೊಂಡರು.
8 ಜೆರುಸಲೇಮಿನ ಸ್ತ್ರೀಯರೇ, ನೀವು ನನ್ನ ಪ್ರಿಯನನ್ನು ಕಂಡರೆ, ಅವನಿಗೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ತಿಳಿಸಿರಿ.
9 ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿಯೇ, ನಿನ್ನ ಪ್ರಿಯನ ಅತಿಶಯವೇನು? ನೀನು ಹೀಗೆ ನಮ್ಮಿಂದ ಪ್ರಮಾಣ ಮಾಡಿಸಲು ನಿನ್ನ ಪ್ರಿಯನ ಅತಿಶಯವೇನು?
10 ನನ್ನ ಪ್ರಿಯನದು ಹೊಳಪಾದ ಕಂದುಬಣ್ಣ. ಹತ್ತು ಸಾವಿರ ಪುರುಷರಲ್ಲಿ ಅವನೇ ಆಕರ್ಷಕ ಪುರುಷ.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ; ಅವನ ಗುಂಗುರು ಕೂದಲು ಕಾಗೆಯಷ್ಟೇ ಕಪ್ಪಾಗಿದೆ.
12 ಅವನ ಕಣ್ಣುಗಳು ಹಾಲಿನಲ್ಲಿ ಸ್ನಾನಮಾಡಿದ ಪಾರಿವಾಳಗಳಂತೆಯೂ ಆಭರಣದಲ್ಲಿ ಜೋಡಿಸಿರುವ ಮುತ್ತಿನಂತೆಯೂ ಇವೆ.
13 ಅವನ ಕೆನ್ನೆಗಳು ಸುಗಂಧಸಸ್ಯಗಳ ದಿಬ್ಬಗಳಂತೆಯೂ ಸುವಾಸನೆಯುಳ್ಳ ಹೂವುಗಳಂತೆಯೂ ಇವೆ. ಅವನ ತುಟಿಗಳು ಕೆಂದಾವರೆಗಳಂತಿವೆ; ಅವನ ತುಟಿಗಳಲ್ಲಿ ಗೋಲರಸವು ತೊಟ್ಟಿಕ್ಕುತ್ತದೆ.
14 ಅವನ ಕೈಗಳು ಪೀತರತ್ನದಿಂದ ಕೂಡಿದ ಬಂಗಾರದ ಸಲಾಕೆಯಂತಿವೆ; ಅವನ ದೇಹವು ನೀಲಿಬಣ್ಣದ ಕಲ್ಲುಗಳಿಂದ ಕೂಡಿದ ನಯವಾದ ದಂತದಂತಿದೆ.
15 ಅವನ ಕಾಲುಗಳು ಬಂಗಾರದ ಪಾದಗಳುಳ್ಳ ಅಮೃತ ಶಿಲೆಯ ಕಂಬಗಳಂತಿವೆ. ಅವನು ಲೆಬನೋನಿನ ದೇವದಾರು ವೃಕ್ಷದಂತೆ ಎತ್ತರವಾಗಿದ್ದಾನೆ.
16 ಹೌದು, ಜೆರುಸಲೇಮಿನ ಸ್ತ್ರೀಯರೇ, ನನ್ನ ಪ್ರಿಯನು ಅತ್ಯಂತ ಮನೋಹರನು; ಅವನ ನುಡಿ ಬಹು ಇಂಪು. ಅವನೇ ನನ್ನ ಪ್ರಿಯನು; ಅವನೇ ನನ್ನ ಕಾಂತನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×