Bible Versions
Bible Books

Zechariah 13 (ERVKN) Easy to Read Version - Kannadam

1 ಆದರೆ ಸಮಯದಲ್ಲಿ ಜೆರುಸಲೇಮಿನಲ್ಲಿ ವಾಸಿಸುವ ಜನರಿಗೂ ದಾವೀದನ ಕುಟುಂಬದವರಿಗೂ ಒಂದು ಹೊಸಬುಗ್ಗೆಯ ನೀರು ಚಿಮ್ಮುವದು. ಬುಗ್ಗೆಯು ಜನರ ಪಾಪಗಳನ್ನು ತೊಳೆದು ಶುದ್ಧಮಾಡುವದಕ್ಕಾಗಿ ಇರುವದು.
2 ಸರ್ವಶಕ್ತನಾದ ಯೆಹೋವನು ಹೇಳುವದೇನೆಂದರೆ, “ಆ ಸಮಯದಲ್ಲಿ ಪ್ರಪಂಚದಲ್ಲಿರುವ ವಿಗ್ರಹಗಳನ್ನೆಲ್ಲಾ ನಾನು ತೆಗೆದುಬಿಡುವೆನು. ಜನರು ಅವುಗಳ ಹೆಸರನ್ನು ತಮ್ಮ ನೆನಪಿಗೆ ತಾರರು. ಸುಳ್ಳು ಪ್ರವಾದಿಗಳನ್ನೂ ಅಶುದ್ಧ ಆತ್ಮಗಳನ್ನೂ ನಾನು ಭೂಮಿಯ ಮೇಲಿಂದ ತೆಗೆದುಬಿಡುವೆನು.
3 ಯಾವನಾದರೂ ಪ್ರವಾದಿಸುವದನ್ನು ಮಂದುವರಿಸಿದರೆ ಅವನು ಶಿಕ್ಷೆಗೆ ಗುರಿಯಾಗುವನು. ‘ನೀನು ಯೆಹೋವನ ಹೆಸರಿನಲ್ಲಿ ಸುಳ್ಳನ್ನು ಹೇಳಿದ್ದೀ. ಆದುದರಿಂದ ನೀನು ಸಾಯಲೇಬೇಕು’ ಎಂದು ಅವನ ಸ್ವಂತ ತಂದೆತಾಯಿಗಳು ಅವನಿಗೆ ಹೇಳುವರು. ಅವನ ಸ್ವಂತ ತಂದೆ ತಾಯಿಗಳು ಅವನು ಸುಳ್ಳು ಪ್ರವಾದನೆ ಹೇಳಿದ್ದಕ್ಕೆ ಅವನನ್ನು ಖಡ್ಗದಿಂದ ಕೊಲ್ಲಿಸುವರು.
4 ಸಮಯದಲ್ಲಿ ಪ್ರವಾದಿಗಳು ತಮ್ಮ ದರ್ಶನ, ಪ್ರವಾದನೆಗಳಿಗಾಗಿ ನಾಚಿಕೊಳ್ಳುವರು. ತಾವು ಪ್ರವಾದಿಗಳೆಂದು ತೋರಿಸಿಕೊಳ್ಳಲು ಧರಿಸುವ ಗಡುಸಾದ ಬಟ್ಟೆಗಳನ್ನು ಧರಿಸಿಕೊಳ್ಳುವದಿಲ್ಲ. ಅವರು ಪ್ರವಾದನೆಗಳೆಂದು ಹೇಳುವ ತಮ್ಮ ಸುಳ್ಳುಗಳಿಂದ ಜನರನ್ನು ಮೋಸಪಡಿಸುವದಿಲ್ಲ.
5 ಅವನು, ‘ನಾನು ಪ್ರವಾದಿಯಲ್ಲ, ನಾನೊಬ್ಬ ರೈತ. ನಾನು ಬಾಲ್ಯಪ್ರಾಯದಿಂದಲೇ ರೈತನಾಗಿದ್ದೇನೆ’ ಎಂದು ಹೇಳುವನು.
6 ಆದರೆ ಬೇರೆ ಜನರು, ‘ಹಾಗಾದರೆ ನಿನ್ನ ಕೈಯಲ್ಲಿ ಗಾಯಗಳೇನು?’ ಎಂದು ಕೇಳಿದಾಗ ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗೆ ಏಟು ಬಿತ್ತು’ ಎಂದು ಅನ್ನುವನು.”
7 ಸರ್ವಶಕ್ತನಾದ ಯೆಹೋವನು ಹೇಳುವದೇನೆಂದರೆ: “ಖಡ್ಗವೇ, ಕುರುಬನನ್ನು ಹೊಡೆ. ನನ್ನ ಸ್ನೇಹಿತನಿಗೆ ಹೊಡೆ. ಕುರುಬನನ್ನು ಹೊಡೆ. ಆಗ ಕುರಿಗಳು ಚದರಿಹೋಗುವವು. ಮತ್ತು ನಾನು ಚಿಕ್ಕವುಗಳನ್ನು ಶಿಕ್ಷಿಸುವೆನು.
8 ದೇಶದ ಮೂರನೇ ಎರಡು ಪಾಲಷ್ಟು ಜನರು ಗಾಯಗೊಂಡು ಸಾಯುವರು. ಒಂದು ಪಾಲಷ್ಟು ಜನರು ಬದುಕಿ ಉಳಿಯುವರು.
9 ಬಳಿಕ ನಾನು ಉಳಿದವರನ್ನು ಪರೀಕ್ಷಿಸುವೆನು. ಅವರಿಗೆ ಅನೇಕ ಸಂಕಟ ಬರಮಾಡುವೆನು. ಅದು ಬೆಳ್ಳಿಯನ್ನು ಬೆಂಕಿಯಲ್ಲಿ ಪರೀಕ್ಷಿಸಿದಂತಿರುವುದು. ಒಬ್ಬನು ಬಂಗಾರವನ್ನು ಪರೀಕ್ಷಿಸುವಂತೆ ನಾನು ಅವರನ್ನು ಪರೀಕ್ಷಿಸುವೆನು. ಆಗ ಅವರು ಸಹಾಯ ಮಾಡುವಂತೆ ನನಗೆ ಮೊರೆಯಿಡುವರು ಮತ್ತು ನಾನು ಅವರಿಗೆ ಉತ್ತರಕೊಡುವೆನು. ಆಗ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು. ಅದಕ್ಕವರು, ‘ಯೆಹೋವನು ನಮ್ಮ ದೇವರು’ ಎಂದು ಹೇಳುವರು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×