Bible Versions
Bible Books

2 Corinthians 3 (ERVKN) Easy to Read Version - Kannadam

1 ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ?
2 ಸ್ವತಃ ನೀವೇ ನಮಗೆ ಯೋಗ್ಯತಾಪತ್ರವಾಗಿದ್ದೀರಿ. ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ.
3 ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.
4 ನಾವು ಸಂಗತಿಗಳನ್ನು ಹೇಳಬಲ್ಲೆವು; ಏಕೆಂದರೆ ನಾವು ಕ್ರಿಸ್ತನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ.
5 ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಳ್ಳೆಯದನ್ನಾದರೂ ಮಾಡಬಲ್ಲೆವೆಂದು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ಸಾಮರ್ಥ್ಯದಿಂದಲೇ ಮಾಡುತ್ತೇವೆ.
6 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.
7 ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಬಳಿಕ ಮಹಿಮೆಯು ಕುಂದಿಹೋಯಿತು.
8 ಹೀಗಿರಲಾಗಿ ಪವಿತ್ರಾತ್ಮನ ಸಂಬಂಧವಾದ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.
9 ಇದರರ್ಥವೇನೆಂದರೆ: ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ.
10 ಹಳೆ ಸೇವೆಯು ಮಹಿಮೆಯನ್ನು ಹೊಂದಿತ್ತು. ಆದರೆ ಅದು ಹೊಸ ಸೇವೆಯ ಎದುರಿನಲ್ಲಿ ಮಹಿಮೆಯಿಲ್ಲದ್ದಾಯಿತು.
11 ಲಯಗೊಂಡ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.
12 ನಮಗೆ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ.
13 ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು.
14 ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ.
15 ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ.
16 ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಮುಸುಕು ತೆಗೆಯಲ್ಪಡುವುದು.
17 ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೊ ಅಲ್ಲಿ ಸ್ವತಂತ್ರವಿರುತ್ತದೆ.
18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×