Bible Versions
Bible Books

Jonah 3 (ERVKN) Easy to Read Version - Kannadam

1 ಯೆಹೋವನು ಯೋನನ ಸಂಗಡ ತಿರುಗಿ ಮಾತನಾಡಿದನು. ಆತನು ಹೇಳಿದ್ದೇನೆಂದರೆ,
2 “ಮಹಾನಗರವಾದ ನಿನೆವೆಗೆ ನೀನು ಎದ್ದುಹೋಗಿ ಅಲ್ಲಿ ನಾನು ಹೇಳಿದ್ದನ್ನು ಅವರಿಗೆ ಸಾರು.”
3 ಯೋನನು ಯೆಹೋವನ ಆಜ್ಞೆಗೆ ವಿಧೇಯನಾಗಿ ನಿನೆವೆಗೆ ಬಂದನು. ನಿನೆವೆಯು ಬಹು ವಿಶಾಲವಾದ ನಗರ. ಅದು ಮೂರು ದಿನಗಳ ಪ್ರಯಾಣದಷ್ಟು ದೊಡ್ಡದಿತ್ತು.
4 ಯೋನನು ನಗರದ ಮಧ್ಯಕ್ಕೆ ಹೋಗಿ ಜನರಿಗೆ ಸಾರಲಿಕ್ಕೆ ಪ್ರಾರಂಭಿಸಿದನು. “ನಲವತ್ತು ದಿನಗಳು ಕಳೆದ ಬಳಿಕ ನಿನೆವೆಯು ನಾಶವಾಗುವದು” ಎಂದು ಜನರಿಗೆ ಸಾರಿದನು.
5 ನಿನೆವೆಯ ಜನರು ದೇವರಿಂದ ಬಂದ ಸಂದೇಶವನ್ನು ನಂಬಿದರು. ಜನರು ತಮ್ಮ ಪಾಪಗಳ ಕುರಿತು ಯೋಚಿಸಲು ಉಪವಾಸ ಮಾಡಿದರು. ತಮ್ಮ ಪಶ್ಚಾತ್ತಾಪಕ್ಕೆ ಗುರುತಾಗಿ ಶೋಕವಸ್ತ್ರವನ್ನು ಧರಿಸಿದರು. ನಗರದ ಎಲ್ಲಾ ಜನರು ಹೀಗೆ ಮಾಡಿದರು. ಉನ್ನತ ಅಧಿಕಾರಿಗಳಿಂದ ಹಿಡಿದು ಕೀಳು ಜನರ ತನಕ ಹಾಗೆ ಮಾಡಿದರು.
6 ನಿನೆವೆಯ ಅರಸನು ಇದನ್ನು ಕೇಳಿ ತಾನು ಮಾಡಿದ ದುಷ್ಕೃತ್ಯಗಳಿಗಾಗಿ ಮನಮರುಗಿದನು. ತಾನು ಸಿಂಹಾಸನದಿಂದಿಳಿದು ರಾಜವಸ್ತ್ರವನ್ನು ತೆಗೆದಿಟ್ಟು ಶೋಕವಸ್ತ್ರವನ್ನು ಧರಿಸಿ ಬೂದಿಯ ಮೇಲೆ ಕುಳಿತುಕೊಂಡನು.
7 ತನ್ನ ಪ್ರಜೆಗಳಿಗೆ ಒಂದು ವಿಶೇಷ ಸಂದೇಶವನ್ನು ಬರೆಯಿಸಿ ನಗರದಲ್ಲೆಲ್ಲಾ ಪ್ರಚುರ ಪಡಿಸಿದನು. ಅದರಲ್ಲಿ ಹೀಗೆ ಬರೆದಿತ್ತು. ಇದು ಅರಸನ ಮತ್ತು ಆತನ ಆಡಳಿತಗಾರರ ಆಜ್ಞೆ: “ಕೆಲವು ಸಮಯದತನಕ ಯಾವ ವ್ಯಕ್ತಯಾಗಲಿ ಪ್ರಾಣಿಯಾಗಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದು. ಮಂದೆಯಾಗಲಿ, ಹಿಂಡಾಗಲಿ ಹುಲ್ಲುಗಾವಲಿಗೆ ಹೋಗಬಾರದು. ನಿನೆವೆಯಲ್ಲಿ ವಾಸಿಸುವ ಯಾವನೆ ಸರಿ, ಊಟ ಮಾಡಬಾರದು, ನೀರು ಕುಡಿಯಬಾರದು.
8 ಪ್ರತಿ ಮನುಷ್ಯನೂ ಪ್ರಾಣಿಯೂ ಶೋಕವಸ್ತ್ರವನ್ನು ಧರಿಸಬೇಕು. ಜನರು ದೇವರಿಗೆ ಗಟ್ಟಿಯಾಗಿ ಮೊರೆಯಿಡಬೇಕು. ಪ್ರತಿಯೊಬ್ಬನು ತನ್ನ ದುಷ್ಟಜೀವಿತವನ್ನು ಬದಲಾಯಿಸಿ ದುಷ್ಟತನ ಮಾಡುವದನ್ನು ನಿಲ್ಲಿಸಬೇಕು.
9 ಒಂದುವೇಳೆ ದೇವರು ತನ್ನ ಮನಸ್ಸನ್ನು ಬದಲಾಯಿಸಾನು. ತಾನು ಯೋಚಿಸಿದ್ದನ್ನು ನೆರವೇರಿಸದೆ ಇರುವನೋ ಏನೋ? ಆತನು ತನ್ನ ಯೋಜನೆಯನ್ನು ಹಿಂದೆಗೆದು, ಕೋಪಿಸಿಕೊಳ್ಳದೆ, ನಮ್ಮನ್ನು ಶಿಕ್ಷಿಸದೆ ಇರುವನೋ ಏನೋ! ಆಗ ನಾವು ನಾಶವಾಗದಿರಬಹುದು!”
10 ಜನರು ಮಾಡಿದವುಗಳನ್ನು ದೇವರು ನೋಡಿದನು; ಅವರು ದುಷ್ಟತನ ಮಾಡುವದನ್ನು ನಿಲ್ಲಿಸಿದ್ದನ್ನು ಗಮನಿಸಿದನು. ಆತನು ಅವರನ್ನು ದಂಡಿಸಲಿಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×