Bible Versions
Bible Books

Micah 7 (ERVKN) Easy to Read Version - Kannadam

1 ನಾನು ಬೇಸರಗೊಂಡಿದ್ದೇನೆ. ಯಾಕೆಂದರೆ ನಾನು ಕೂಡಿಸಲ್ಪಟ್ಟ ಹಣ್ಣಿನಂತಿದ್ದೇನೆ; ಕೊಯಿದು ಶೇಖರಿಸಿದ ದ್ರಾಕ್ಷಿ ಹಣ್ಣಿನಂತಿದ್ದೇನೆ. ತಿನ್ನಲು ದ್ರಾಕ್ಷಿಹಣ್ಣು ಏನೂ ಉಳಿಯಲಿಲ್ಲ. ನನಗೆ ಪ್ರಿಯವಾದ ಫಲಕಾಲದ ಆರಂಭದಲ್ಲೇ ಫಲಿಸುವ ಅಂಜೂರದ ಹಣ್ಣು ಸಿಕ್ಕಲೇ ಇಲ್ಲ.
2 ನಾನು ಹೇಳುವದೇನೆಂದರೆ ನಂಬಿಗಸ್ತ ಜನರೆಲ್ಲಾ ಹೋಗಿಬಿಟ್ಟರು. ದೇಶದಲ್ಲಿ ಒಳ್ಳೇ ಜನರು ಯಾರೂ ಉಳಿಯಲಿಲ್ಲ. ಪ್ರತಿಯೊಬ್ಬನೂ ಇನ್ನೊಬ್ಬನನ್ನು ಕೊಲ್ಲಲು ಕಾಯುತ್ತಿದ್ದಾನೆ. ಪ್ರತಿಯೊಬ್ಬನೂ ತನ್ನ ಸೋದರನನ್ನು ಸಿಕ್ಕಿಸಿಹಾಕಲು ಕಾಯುತ್ತಿದ್ದಾನೆ.
3 “ಕೆಟ್ಟದ್ದನ್ನು ಎರಡೂ ಕೈಗಳಿಂದ ನಡಿಸಲು ಜನರು ನಿಪುಣರಾಗಿದ್ದಾರೆ. ಅಧಿಕಾರಿಗಳು ಲಂಚ ಕೇಳುತ್ತಾರೆ. ನ್ಯಾಯಾಧೀಶರು ತಮ್ಮ ತೀರ್ಪು ಬದಲಾಯಿಸಲು ಹಣ ಕೇಳುತ್ತಿದ್ದಾರೆ. ಪ್ರಮುಖ ನಾಯಕರು ನ್ಯಾಯವಾದ ಮತ್ತು ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ. ತಮ್ಮ ಇಷ್ಟಪ್ರಕಾರ ಅವರು ಮಾಡುತ್ತಿದ್ದಾರೆ.
4 ಅವರಲ್ಲಿರುವ ಉತ್ತಮರೂ ಸಹ ಮುಳ್ಳಿನ ಪೊದೆಯಂತಿದ್ದಾರೆ. ಅವರಲ್ಲಿರುವ ಉತ್ತಮರೂ ಸಹ ಡೊಂಕುಡೊಂಕಾಗಿರುವ ಮುಳ್ಳುಪೊದೆಗಿಂತಲೂ ಡೊಂಕಾಗಿದ್ದಾರೆ. ನಿನ್ನ ಪ್ರವಾದಿಗಳು ದಿನವು ಬರುತ್ತಿದೆ ಎಂದು ಹೇಳುತ್ತಿದ್ದಾರೆ. ನಿನ್ನ ಪ್ರವಾದಿಗಳ ದಿವಸವು ಬಂದದೆ. ಈಗ ನೀನು ಶಿಕ್ಷಿಸಲ್ಪಡುವಿ. ನೀನೀಗ ಗಲಿಬಿಲಿಗೆ ಒಳಗಾಗುವಿ!
5 ನಿನ್ನ ನೆರೆಯವನ ಮೇಲೆ ನಂಬಿಕೆ ಇಡಬೇಡ! ನಿನ್ನ ಸ್ನೇಹಿತನ ಮೇಲೆ ಭರವಿಸವಿಡಬೇಡ! ನಿನ್ನ ಹೆಂಡತಿಯೊಂದಿಗೂ ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸಬೇಡ.
6 ಒಬ್ಬನ ವೈರಿಯು ಅವನ ಮನೆಯವರೇ ಆಗಿರುತ್ತಾರೆ. ಮಗನು ತಂದೆಗೆ ಗೌರವವನ್ನು ಕೊಡುವದಿಲ್ಲ. ಮಗಳು ತಾಯಿಗೆ ವಿರುದ್ಧವಾಗಿ ನಡೆಯುವಳು. ಸೊಸೆಯು ಅತ್ತೆಗೆ ವಿರುದ್ಧವಾಗಿ ನಡೆಯುವಳು.
7 ನಾನು ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುತ್ತೇನೆ. ದೇವರ ರಕ್ಷಣೆಗಾಗಿ ನಿರೀಕ್ಷಿಸುತ್ತೇನೆ. ನನ್ನ ದೇವರು ನನಗೆ ಕಿವಿಗೊಡುತ್ತಾನೆ.
8 ನಾನು ಬಿದ್ದಿದ್ದೇನೆ, ಆದರೆ ವೈರಿಯೇ, ನನ್ನನ್ನು ನೋಡಿ ನಗಾಡಬೇಡ! ನಾನು ತಿರುಗಿ ಏಳುತ್ತೇನೆ; ನಾನೀಗ ಅಂಧಕಾರದಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಯೆಹೋವನು ನನ್ನ ಬೆಳಕಾಗಿರುತ್ತಾನೆ.
9 This verse may not be a part of this translation
10 “ನಿನ್ನ ದೇವರಾದ ಯೆಹೋವನು ಎಲ್ಲಿ?” ಎಂದು ಕೇಳಿದ ವೈರಿಗಳು ಇದನ್ನು ನೋಡಿ, ನಾಚಿಕೆಗೊಳ್ಳುವರು. ಆಗ ನಾನು ಅವರ ವಿಷಯವಾಗಿ ನಗಾಡುವೆನು; ರಸ್ತೆಯ ಮಣ್ಣಿನ ಮೇಲೆ ನಡೆಯುವಂತೆ ಜನರು ಅವರ ಮೇಲೆ ನಡಿಯುವರು.
11 ನಿನ್ನ ನಗರದ ಗೋಡೆಗಳು ತಿರುಗಿ ಕಟ್ಟಲ್ಪಡುವ ದಿನಗಳು ಬರುತ್ತವೆ. ಆಗ ದೇಶವು ಬೆಳೆಯುವುದು.
12 ನಿನ್ನ ಜನರು ದೇಶಕ್ಕೆ ಹಿಂತಿರುಗುವರು. ಅವರು ಅಶ್ಶೂರದಿಂದಲೂ ಈಜಿಪ್ಟ್ ನಗರಗಳಿಂದಲೂ ಹಿಂದೆ ಬರುವರು, ನಿನ್ನ ಜನರು ಈಜಿಪ್ಟಿನಿಂದಲೂ ಯೂಫ್ರೇಟೀಸ್ ನದಿಯ ಆಚೆಕಡೆಯಿಂದಲೂ ಬರುವರು. ಪಶ್ಟಿಮದ ಸಮುದ್ರದ ಕಡೆಯಿಂದ ಬರುವರು. ಪೂರ್ವದ ಪರ್ವತಗಳ ಕಡೆಯಿಂದ ಬರುವರು.
13 ದೇಶದಲ್ಲಿ ವಾಸಿಸಿದ್ದ ಜನರಿಂದಲೂ ಅವರು ಮಾಡಿದ್ದ ಕೆಲಸಗಳಿಂದಲೂ ದೇಶವು ಹಾಳಾಗಿ ಹೋಗಿತ್ತು.
14 “ಆದುದರಿಂದ ನಿನ್ನ ಜನರನ್ನು ಕಬ್ಬಿಣದ ಕೋಲಿನಿಂದ ಆಳು, ನಿನಗೆ ಸೇರಿದ ಜನರ ಹಿಂಡುಗಳನ್ನು ಆಳು. ಗುಂಪು ಅಡವಿಯಲ್ಲಿ ತಾನಾಗಿಯೇ ವಾಸಿಸುತ್ತದೆ; ಕರ್ಮೆಲ್ ಬೆಟ್ಟದಲ್ಲಿಯೂ ವಾಸಿಸುತ್ತದೆ. ಹಿಂದಿನ ಕಾಲದಲ್ಲಿ ಮಾಡಿದಂತೆ ಗುಂಪು ಬಾಷಾನ್ ಮತ್ತು ಗಿಲ್ಯಾದ್ ಪ್ರಾಂತ್ಯದಲ್ಲಿ ವಾಸಿಸುತ್ತದೆ.
15 ನಿನ್ನನ್ನು ಈಜಿಪ್ಟಿನಿಂದ ಬರಮಾಡಿದಾಗ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಇನ್ನೂ ಅನೇಕ ಅದ್ಭುತಗಳನ್ನು ನೀನು ನೋಡುವಂತೆ ಮಾಡುವೆನು.
16 ಜನಾಂಗಗಳು ಅದ್ಭುತವನ್ನು ನೋಡಿ ನಾಚಿಕೆಗೊಳ್ಳುವರು. ನನ್ನ ಶಕ್ತಿಯ ಎದುರು ಅವರ ಬಲವು ಏನೂ ಅಲ್ಲವೆಂದು ತಿಳಿಯುವರು. ಅವರು ಆಶ್ಚರ್ಯದಿಂದ ಚಕಿತರಾಗಿ ತಮ್ಮ ಬಾಯಿಗಳ ಮೇಲೆ ಕೈಗಳನ್ನಿಡುವರು. ತಮ್ಮ ಕಿವಿಗಳನ್ನು ಮುಚ್ಚಿ ವಾರ್ತೆ ಕೇಳಲು ನಿರಾಕರಿಸುವರು.
17 ಧೂಳಿನ ಮೇಲೆ ಹಾವಿನಂತೆ ಅವರು ಹರಿದಾಡುವರು. ಭಯದಿಂದ ನಡುಗುವರು. ನೆಲದ ಮೇಲಿನ ಬಿಲಗಳಿಂದ ಹರಿದುಕೊಂಡು ಬರುವ ಹುಳಗಳಂತಿರುವರು. ನಮ್ಮ ದೇವರಾದ ಯೆಹೋವನ ಬಳಿಗೆ ಬಂದು ನಿಮ್ಮನ್ನು ಭಯದಿಂದ ನೋಡುವರು.
18 ನಿನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ. ಪಾಪದಲ್ಲಿ ಬಿದ್ದವರನ್ನು ನೀನು ಕ್ಷಮಿಸುತ್ತೀ. ನಿನ್ನ ಜನಶೇಷವನ್ನು ಮನ್ನಿಸುವಿ. ನೀನು ನಿತ್ಯಕ್ಕೂ ಕೋಪಿಸುವದಿಲ್ಲ. ಯಾಕೆಂದರೆ ದಯೆತೋರಿಸುವದರಲ್ಲಿ ನೀನು ಸಂತೋಷಿಸುತ್ತೀ.
19 ಯೆಹೋವನೇ, ನಮ್ಮನ್ನು ತಿರುಗಿ ಸಂತೈಸು. ನಮ್ಮ ಪಾಪಗಳನ್ನು ನಮ್ಮಿಂದ ನಿವಾರಿಸು. ನಮ್ಮೆಲ್ಲಾ ಪಾಪಗಳನ್ನು ಆಳವಾದ ಸಮುದ್ರದ ತಳದಲ್ಲಿ ಹಾಕು.
20 ನೀನು ಯಾಕೋಬನಿಗೆ ನಂಬಿಗಸ್ತನಾಗುವಿ. ನೀನು ಅಬ್ರಹಾಮನ ಮೇಲೆ ದಯೆತೋರಿಸಿ. ನಂಬಿಗಸ್ತನಾಗುವಿ. ಇದನ್ನು ನೀನು ಬಹಳ ಕಾಲದ ಹಿಂದೆಯೇ ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿರುವೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×